ADVERTISEMENT

ಬ್ರಾಹ್ಮಣರಿಗೆ ಆತ್ಮ ಗೌರವ ಹೆಚ್ಚು

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:18 IST
Last Updated 8 ಫೆಬ್ರುವರಿ 2020, 14:18 IST
ಕಾರ್ಯಕ್ರಮದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಅವರನ್ನು ಅಭಿನಂದಿಸಲಾಯಿತು.   

ತುಮಕೂರು: ಬ್ರಾಹ್ಮಣರು ಆಚರಣೆ, ಅನುಷ್ಠಾನಗಳನ್ನು ಬಿಟ್ಟರೂ ಬ್ರಾಹ್ಮಣತ್ವ ಕಡಿದುಕೊಳ್ಳಬಾರದು ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ತಿಳಿಸಿದರು.

ಇಲ್ಲಿನ ಜಯನಗರ ವಿಪ್ರ ಭವನದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬ್ರಾಹ್ಮಣರಲ್ಲಿ ಎಷ್ಟೇ ಒಳ ಪಂಗಡ, ಸಿದ್ಧಾಂತಗಳಿದ್ದರೂ ಬ್ರಾಹ್ಮಣರೆಲ್ಲಾ ಒಂದೇ ಸಮುದಾಯ ಎಂಬ ಭಾವನೆ ಮೂಡಬೇಕು. ಬ್ರಾಹ್ಮಣರಿಗೆ ಆತ್ಮ ಗೌರವ ಹೆಚ್ಚು, ಯಾರ ಮನೆ ಬಾಗಿಲಿಗೆ ಹೋಗುವ ಪ್ರವೃತ್ತಿ ಸಮಾಜದವರಿಗೆ ಇಲ್ಲ’ ಎಂದರು.

ಪ್ರಪಂಚದ ಯಾವುದೇ ದೇಶಕ್ಕೆ ಹೋದರೂ ಬ್ರಾಹ್ಮಣರು ಇದ್ದೇ ಇರುತ್ತಾರೆ. ವಿಪ್ರ ಸಮಾಜದ ಯುವಶಕ್ತಿ ಆಡಳಿತ ಮುಂಚೂಣಿಗೆ ಬರಬೇಕಾಗಿದೆ. ತಮ್ಮ ಮೇಲೆ ಸಮಾಜ ಇಟ್ಟಿರುವ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ADVERTISEMENT

ತಿಪಟೂರು ಶಾಸಕ ಬಿ.ಸಿ.ನಾಗೇಶ್, ‘ಸ್ವಾವಲಂಬನೆ ಹಾಗೂ ಸ್ವಾಭಿಮಾನದಿಂದ ಬದುಕುತ್ತಿರುವ ಬ್ರಾಹ್ಮಣರಿಗೆ ಜಾತಿ ಬಲ, ಜನ ಬಲ, ಅಧಿಕಾರ ಬಲ ಇಲ್ಲ. ಆದರೆ ಬುದ್ಧಿವಂತಿಕೆ ಬಲ ಇದೆ. ಇದನ್ನು ಸಮುದಾಯದವರು ಮರೆಯಬಾರದು’ ಎಂದರು.

ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ‘ಬ್ರಾಹ್ಮಣ ಸಮಾಜ ಸಂಘಟನೆಗೆ ಕೈ ಜೋಡಿಸುವ ಮೂಲಕ ಸ್ವಾವಲಂಬನೆ-ಸಂಸ್ಕಾರ ಉಳಿಸಿ ಬೆಳೆಸಬೇಕು. ಸಮಾಜದ ಮಕ್ಕಳ ಶಿಕ್ಷಣಕ್ಕೆ ಧನಸಹಾಯ ನೀಡುವ ಜತೆಗೆ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ. ಭವಿಷ್ಯದಲ್ಲಿ ಸಮಾಜದಿಂದ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಆಗಬೇಕಿದೆ’ ಎಂದರು.

ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಎನ್.ಆರ್.ನಾಗರಾಜರಾವ್, ‘ಬ್ರಾಹ್ಮಣರ ಕಲ್ಯಾಣಕ್ಕೆ ಪ್ರಸ್ತುತ ಹಾಕಿಕೊಂಡಿರುವ ಯೋಜನೆಗಳು ಪೂರಕವಾಗಿವೆ. ಯಾವುದೇ ಜಿಲ್ಲೆಗೆ ತಾರತಮ್ಯ ಮಾಡದೆ ಪ್ರತಿ ಜಿಲ್ಲೆಯಲ್ಲೂ ಸಂಘಟನೆಗೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಭಾ ಪ್ರಧಾನ ಕಾರ್ಯದರ್ಶಿ ಸುರೇಶ್ ಹೊಳ್ಳ, ಉಪಾಧ್ಯಕ್ಷ ಎಚ್.ಎಸ್.ರಾಘವೇಂದ್ರ, ಎಂ.ಕೆ.ನಾಗರಾಜರಾವ್, ಎಚ್.ಎನ್.ಚಂದ್ರಶೇಖರ್, ಶ್ರುತಿ ಮಂಜುನಾಥ್, ಡಾ.ಹರೀಶ್ ಹಿರಣ್ಣಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.