ADVERTISEMENT

ವಿಶ್ವಕರ್ಮರ ಜಯಂತಿ ವಿಶ್ವವ್ಯಾಪಿ ಆಚರಣೆ ಮಾಡಲಿ: ಡಾ.ಜಿ.ಪರಮೇಶ್ವರ ಆಶಯ

ವಿಶ್ವಕರ್ಮ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ಧ ಮೆರವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 10:07 IST
Last Updated 17 ಸೆಪ್ಟೆಂಬರ್ 2018, 10:07 IST
ವಿಶ್ವಕರ್ಮ ಮತ್ತು ಕಾಳಿಕಾಂಬ ಮೂರ್ತಿ ಮೆರವಣಿಗೆಗೆ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹಿರೇಮಠ ಶಿವಾನಂದ ಶಿವಾಚಾರ್ಯರು, ಸಮಾಜದ ಮುಖಂಡರಿದ್ದರು
ವಿಶ್ವಕರ್ಮ ಮತ್ತು ಕಾಳಿಕಾಂಬ ಮೂರ್ತಿ ಮೆರವಣಿಗೆಗೆ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹಿರೇಮಠ ಶಿವಾನಂದ ಶಿವಾಚಾರ್ಯರು, ಸಮಾಜದ ಮುಖಂಡರಿದ್ದರು   

ತುಮಕೂರು: 'ವಿಶ್ವಕರ್ಮರ ಜಯಂತಿ ಆಚರಣೆ ಆ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲರೂ ಭಾಗವಹಿಸಿ ಆಚರಣೆ ಮಾಡಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಆಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಕಾಳಿಕಾಂಬ ಮತ್ತು ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು.

ಹಿಂದೂ ಸಂಪ್ರದಾಯ ಪ್ರಕಾರ ವಿಶ್ವಕರ್ಮರು ವಿಶ್ವವನ್ನೇ ರಚನೆ ಮಾಡಿದವರು. ಅವರ ಜಯಂತಿಯನ್ನು ಬರೀ ಭಾರತೀಯರಷ್ಟೇ ಅಲ್ಲ. ಜಗತ್ತಿನಾದ್ಯಂತ ಆಚರಣೆ ಮಾಡಬೇಕು ಎಂದರು.

ADVERTISEMENT

‘ಸರ್ಕಾರದಿಂದಲೇ ವಿಶ್ವಕರ್ಮ ಜಯಂತಿ ಆಚರಣೆ ಮಾಡಬೇಕು ಎಂಬುದು ವಿಶ್ವಕರ್ಮ ಸಮಾಜದವರ ಬಹುದಿನದ ಬೇಡಿಕೆಯಾಗಿತ್ತು. ಸಮಾಜದವರ ಭಾವನೆಯನ್ನು ನಾನು ನಮ್ಮ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದಾಗ ಅವರು ವಿಶ್ವಕರ್ಮ ಜಯಂತಿಯನ್ನು ಸರ್ಕಾರದಿಂದಲೇ ಆಚರಣೆ ಮಾಡುವ ಘೋಷಣೆ ಮಾಡಿದರು’ ಎಂದು ವಿವರಿಸಿದರು.

ಬಾಲಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ‘ವಿಶ್ವಕರ್ಮ ಸಮುದಾಯದವರು ಆಧುನಿಕತೆಯಲ್ಲಿ ತಮ್ಮ ಕುಶಲ ಕಲೆಯನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಕಲೆಗೆ ಜಗತ್ತಿನಲ್ಲಿ ತುಂಬಾ ಬೆಲೆ ಇದೆ. ಮಾರುಕಟ್ಟೆಯ ತಂತ್ರಗಳನ್ನು ಅರಿತು ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಬೇಕಾಗಿದೆ. ಮುಂದಿನ ಪೀಳಿಗೆಗೂ ಈ ಕುಶಲ ಕಲೆ ಮುಂದುವರಿದುಕೊಂಡು ಹೋಗಬೇಕಾಗಿದೆ’ ಎಂದು ಹೇಳಿದರು.

’ತುಮಕೂರಿನಲ್ಲಿ ವಿಶ್ವಕರ್ಮ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣಕ್ಕೆ ಸಮಾಜದಲ್ಲಿ ಆರ್ಥಿಕವಾಗಿ ಬಲಿಷ್ಠರಾಗಿರುವವರು ಕೈ ಜೋಡಿಸಬೇಕು. ಶಾಸಕರ ನಿಧಿಯಿಂದ ₹ 2 ಲಕ್ಷ ಅನುದಾನ ಪ್ರತಿ ವರ್ಷ ದೊರಕಿಸುತ್ತೇನೆ’ ಎಂದು ಭರವಸೆ ನೀಡಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ನಾಗರಾಜು ವಿಶ್ವಕರ್ಮ ಮಾತನಾಡಿ,‘ ದೇವಸ್ಥಾನದ ಕಮಾನು ನಿರ್ಮಾಣಕ್ಕೆ ಸರ್ಕಾರ ₹ 3 ಲಕ್ಷ ಅನುದಾನ ಮಂಜೂರು ಮಾಡಿದ್ದರೂ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ. ರಾಜಕೀಯವಾಗಿಯೂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಲಭಿಸಿಲ್ಲ’ ಎಂದರು.

‘ವಿಶ್ವಕರ್ಮರು ಜನ್ಮತಃ ಎಂಜಿನಿಯರ್‌ಗಳು. ಆದರೆ,ಈ ಸಮಾಜದ ಅಭಿವೃದ್ಧಿಗೆ ಸರ್ಕಾರ ಶೇ 1ರಷ್ಟೂ ಅನುದಾನ ದೊರಕಿಸುತ್ತಿಲ್ಲ. ಸಮಾಜ ಸಂಘಟಿತವಾದರೆ ಸರ್ಕಾರ ಕಣ್ತೆರೆಯುತ್ತದೆ’ ಎಂದು ಹೇಳಿದರು.

ಉಪನ್ಯಾಸ ನೀಡಿದ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಪೂರ್ವಾಚಾರ್, ‘ಎಲ್ಲ ನಾಗರಿಕತೆಯಲ್ಲೂ ವಿಶ್ವಕರ್ಮರ ಹೆಜ್ಜೆ ಗುರುತಗಳು ಕಂಡು ಬರುತ್ತವೆ. ಈ ಸಮಾಜದಲ್ಲ ಜನಿಸಿದ ಜಕಣಾಚಾರಿ ಅವರನ್ನು ವಿದೇಶಿ ಸಂಶೋಧಕರು ‘ಮಾಸ್ಟರ್ ಕ್ರಾಫ್ಟ್‌ ಮನ್’ ಎಂದು ಬಣ್ಣಿಸಿದ್ದಾರೆ’ ಎಂದು ಹೇಳಿದರು.

ವಿಶ್ವಕರ್ಮ, ಗಾಯಿತ್ರಿ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯ ಕಾರ್ಯದರ್ಶಿ ಬಿ.ಜಕಣಾಚಾರ್, ವಿಶ್ವಶಕ್ತಿ ಮಹಿಳಾ ಸಂಘದ ಅಧ್ಯಕ್ಷೆ ಜಗದಂಬಾ ನಂಜಪ್ಪ, ಸಮಾಜದ ಮುಖಂಡ ಬಿ.ಜಕಣಾಚಾರ್ ವೇದಿಕೆಯಲ್ಲಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಅಪ್ಪಿನಕಟ್ಟೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು

ವಿಶ್ವಕರ್ಮ ಮತ್ತು ಕಾಳಿಕಾಂಬ ಮೂರ್ತಿ ಮೆರವಣಿಗೆಗೆ ಸಚಿವ ಡಾ.ಜಿ.ಪರಮೇಶ್ವರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹಿರೇಮಠ ಶಿವಾನಂದ ಶಿವಾಚಾರ್ಯರು, ಸಮಾಜದ ಮುಖಂಡರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.