
ಕುಣಿಗಲ್: ಮತದಾನ ಮಾಡಲು ಸ್ವಗ್ರಾಮಕ್ಕೆ ತೆರಳುತ್ತಿದ್ದ ಮಹಿಳೆಯನ್ನು ಸೀನಿಮಿಯ ರೀತಿಯಲ್ಲಿ ಅಪಹರಿಸಿದ ದುಷ್ಕರ್ಮಿಗಳು ಆಭರಣ ದೋಚಿ ಪರಾರಿಯಾಗಿದ್ದಾರೆ.
ಚಿನ್ನಾಭರಣ ಕಳೆದುಕೊಂಡ ಮಹಿಳೆ ಶಾಂತಮ್ಮ. ಮಲ್ಲಾಘಟ್ಟ ಗ್ರಾಮದವರಾದ ಇವರು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದಾರೆ. ಮತದಾನ ಮಾಡಲು ಗುರುವಾರ ಬೆಳಿಗ್ಗೆ ಸ್ವಗ್ರಾಮ ಮಲ್ಲಾಘಟ್ಟಕ್ಕೆ ತೆರಳಲು ಬೆಂಗಳೂರಿಂದ ಕುಣಿಗಲ್ ಪಟ್ಟಣಕ್ಕೆ ಬಂದಿದ್ದರು. ಮೋದೂರಿನ ಅಜ್ಜಿ ಮನೆಯಲ್ಲಿದ್ದ ಮಗಳೂ ಮತದಾನ ಮಾಡಲು ಬರುವವಳಿದ್ದುದರಿಂದ ಅವಳ ದಾರಿ ಕಾಯುತ್ತ ಹುಚ್ಚಮಾಸ್ತಿಗಡ ವೃತ್ತದ ತಂಗುದಾಣದಲ್ಲಿ ಕುಳಿತಿದ್ದರು.
ಇದೇ ವೇಳೆ ಅಲ್ಲಿಗೆ ಬಂದ ಕೆಲ ದುಷ್ಕರ್ಮಿಗಳು, ‘ನಿಮ್ಮ ಸಂಬಂಧಿ ಮತಚಲಾಯಿಸಲು ಕರೆತರಲು ಹೇಳಿದ್ದಾರೆ’ ಎಂದು ನಂಬಿಸಿ ಟಾಟಾ ಸುಮೊ ವಾಹನದ ಬಳಿ ಕರೆದೊಯ್ದು ಥಳಿಸಿ ಅಪಹರಣ ಮಾಡಿದ್ದಾರೆ. 30 ಗ್ರಾಂ ಚಿನ್ನದ ಸರ, ₹ 6 ಸಾವಿರ ನಗದು, ಮೊಬೈಲ್ ದೋಚಿದ್ದಾರೆ.
ಚಿನ್ನದ ಸರದಲ್ಲಿದ್ದ ಮಾಂಗಲ್ಯ, ₹ 500 ಮಹಿಳೆಗೆ ನೀಡಿ ತಾಲ್ಲೂಕಿನ ಗಡಿಭಾಗದ ಕಾಡಶೆಟ್ಟಿಹಳ್ಳಿ ಬಳಿ ವಾಹನದಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ. ನಂತರ ಮಹಿಳೆ ಸ್ಥಳೀಯರ ನೆರವಿನಿಂದ ಬಂದು ಕುಣಿಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.