ADVERTISEMENT

ಗುಬ್ಬಿ: ಮತದಾರರ ಪಟ್ಟಿ ಪರಿಷ್ಕರಣಾ ಆಂದೋಲನ

ಜ. 13ಕ್ಕೆ ಅರ್ಹ ದಿನಾಂಕ ನಿಗದಿ: ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 4:13 IST
Last Updated 13 ನವೆಂಬರ್ 2021, 4:13 IST
ಗುಬ್ಬಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಹಶೀಲ್ದಾರ್ ಬಿ. ಆರತಿ. ಚುನಾವಣಾ ಶಿರಸ್ತೇದಾರ್ ರವೀಶ್, ತರಬೇತಿ ತಹಶೀಲ್ದಾರ್ ಅಶ್ವಿನಿ ಇದ್ದರು
ಗುಬ್ಬಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಹಶೀಲ್ದಾರ್ ಬಿ. ಆರತಿ. ಚುನಾವಣಾ ಶಿರಸ್ತೇದಾರ್ ರವೀಶ್, ತರಬೇತಿ ತಹಶೀಲ್ದಾರ್ ಅಶ್ವಿನಿ ಇದ್ದರು   

ಗುಬ್ಬಿ: ಚುನಾವಣಾ ಆಯೋಗದ ನಿರ್ದೇಶನದಂತೆ ತಾಲ್ಲೂಕು ಕಚೇರಿ ಹಾಗೂ ತಾಲ್ಲೂಕಿನ ಎಲ್ಲಾ 212 ಮತಗಟ್ಟೆಗಳಲ್ಲಿಯೂ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ತಹಶೀಲ್ದಾರ್ ಬಿ. ಆರತಿ ತಿಳಿಸಿದರು.

ತಾಲ್ಲೂಕು ಕಚೇರಿಯ ಕಂದಾಯ ಸಭಾಂಗಣದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಗೆ ಹೊಸ ಸೇರ್ಪಡೆ, ಯಾವುದೇ ದೋಷ, ಬದಲಾವಣೆಗಳಿದ್ದರೂ ಮತದಾರರು ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ADVERTISEMENT

2022ರ ಜ. 13ಕ್ಕೆ ಅರ್ಹ ದಿನಾಂಕವನ್ನು ಇಟ್ಟುಕೊಂಡಿದ್ದು 18 ವರ್ಷ ಪೂರೈಸುವ ಹೊಸ ಮತದಾರರ ಸೇರ್ಪಡೆಗೆ ನಮೂನೆ 6, ಪಟ್ಟಿಯಿಂದ ಕೈಬಿಡಲು ನಮೂನೆ 7, ತಿದ್ದುಪಡಿಗೆ ನಮೂನೆ 8, ವರ್ಗಾವಣೆಗೆ ನಮೂನೆ 8ಎರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಅರ್ಹ ಮತದಾರರು ಚುನಾವಣಾ ಆಯೋಗದ ವೋಟರ್ ಹೆಲ್ಪ್‌ಲೈನ್ ಆ್ಯಪ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಮುಂದಿನ ನಾಲ್ಕು ಭಾನುವಾರಗಳಂದು ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣಾ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಬೂತ್‌ಮಟ್ಟದ ಅಧಿಕಾರಿಗಳ ಜೊತೆ ಕಂದಾಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಮತದಾರರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಅಭಿಯಾನವನ್ನು ಯಶಸ್ವಿ ಗೊಳಿಸಬೇಕು ಎಂದು ಕೋರಿದರು.

ತಾಲ್ಲೂಕಿನ ಎಲ್ಲಾ ಕಾಲೇಜಿನ ಪ್ರಾಂಶುಪಾಲರಿಗೆ ಈಗಾಗಲೇ ಮಾಹಿತಿ ನೀಡಿದ್ದು ಅರ್ಹರಿರುವ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮರಣ ಹೊಂದಿರುವವರು ಹಾಗೂ ಎರಡೆರಡು ಕಡೆ ಮತದಾರ ಪಟ್ಟಿಯಲ್ಲಿ ಹೆಸರು ಇರುವವರನ್ನು ಗುರುತಿಸಿ ಕಡ್ಡಾಯವಾಗಿ ಒಂದು ಕ್ಷೇತ್ರದ ಪಟ್ಟಿಯಿಂದ ಬಿಡುಗಡೆಗೊಳಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ತರಬೇತಿ ತಹಶೀಲ್ದಾರ್ ಅಶ್ವಿನಿ, ಚುನಾವಣಾ ಶಿರಸ್ತೇದಾರ್ ರವೀಶ್, ಚುನಾವಣಾ ಸಿಬ್ಬಂದಿಯಾದ ವಿವೇಕ್, ಯೋಗೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.