ADVERTISEMENT

ನೀರಿನ ಸಮಸ್ಯೆ: ಮುನ್ನೆಚ್ಚರಿಕೆ ವಹಿಸಿ

ಕೋವಿಡ್‌ ತಡೆಗೆ ಮಾರ್ಗಸೂಚಿ ಪಾಲಿಸಿ: ಶಾಸಕ ಡಾ.ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 2:26 IST
Last Updated 4 ಏಪ್ರಿಲ್ 2021, 2:26 IST
ಕೊರಟಗೆರೆ ಪಟ್ಟಣದಲ್ಲಿ ನಡೆದ ತುರ್ತು ಸಭೆಯಲ್ಲಿ ಶಾಸಕ ಡಾ.ಜಿ. ಪರಮೇಶ್ವರ ಮಾತನಾಡಿದರು
ಕೊರಟಗೆರೆ ಪಟ್ಟಣದಲ್ಲಿ ನಡೆದ ತುರ್ತು ಸಭೆಯಲ್ಲಿ ಶಾಸಕ ಡಾ.ಜಿ. ಪರಮೇಶ್ವರ ಮಾತನಾಡಿದರು   

ಕೊರಟಗೆರೆ: ರಾಜ್ಯದಲ್ಲಿ ಕೋವಿಡ್ ಸಮಸ್ಯೆ ಮತ್ತೆ ಮರುಕಳಿಸುತ್ತಿದ್ದು, ಜನರನ್ನು ರೋಗದಿಂದ ರಕ್ಷಿಸುವ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲಿದೆ ಎಂದು ಶಾಸಕ ಡಾ.ಜಿ. ಪರಮೇಶ್ವರ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಬೇಸಿಗೆ ಪ್ರಾರಂಭವಾಗಿದ್ದು, ತಾಲ್ಲೂಕಿನಾದ್ಯಂತ ನೀರಿನ ಸಮಸ್ಯೆ ಕಂಡು ಬರದಂತೆ ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಕೋವಿಡ್ ಸಮಸ್ಯೆ ಮತ್ತೆ ಉಲ್ಬಣವಾಗುತ್ತಿದ್ದು, ಗ್ರಾಮೀಣ ಭಾಗ ಸೇರಿದಂತೆ ಪಟ್ಟಣ ಪ್ರದೇಶದಲ್ಲಿ ಮುಂಜಾಗ್ರತೆ ವಹಿಸಬೇಕು. ಜನರಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಲು ಔಷಧಿ ಸಂಗ್ರಹಣೆಗೆ ಸೂಚಿಸ ಲಾಗಿದೆ. ಮಾರ್ಗಸೂಚಿ ಪಾಲಿಸಬೇಕು. ನೀರಿನ ಸಮಸ್ಯೆ ಬಗೆಹರಿಸಲು 15ನೇ ಹಣಕಾಸು ಯೋಜನಾಯ ಮೊತ್ತವನ್ನು ಬಳಸುವಂತೆ ಗ್ರಾಮ ಪಂಚಾಯಿತಿಗಳಿಗೆ ಆದೇಶಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕ್ಷೇತ್ರದ ಪ್ರತಿ ಗ್ರಾಮಗಳನ್ನೂ ಗುಡಿಸಲು ಮುಕ್ತ ಮಾಡುವ ಉದ್ದೇಶದಿಂದ ನಿವೇಶನ, ವಸತಿಹೀನರಿಗೆ ಮನೆ ನಿರ್ಮಿಸಿ ಕೊಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕಾಗಿ 18 ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಗುರುತಿಸಿ ಮನೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ಮಾಡಲಾಗಿದೆ ಎಂದರು.

ಕೋಳಾಲ ಮತ್ತು ಸಿದ್ದರಬೆಟ್ಟದಲ್ಲಿ ಇಂದಿರಾ, ಅಂಬೇಡ್ಕರ್ ವಸತಿಶಾಲೆ ಸೇರಿದಂತೆ ಹಲವು ಕಡೆ ವಸತಿಶಾಲೆ ಪ್ರಾರಂಭಿಸಲಾಗಿದೆ. ಇದರಿಂದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಇದಕ್ಕೂ ಮೊದಲು ಮೀನುಗಾರ ಫಲಾನುಭವಿಗಳಿಗೆ ಕಿಟ್ ವಿತರಣೆ, ತುಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಚೆಕ್ ವಿತರಣೆ, ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಬಳಿಯಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಟೂಲ್‌ಕಿಟ್ ವಿತರಿಸಿದರು. ಕಿತ್ತೂರರಾಣಿ ಚನ್ನಮ್ಮ ವಸತಿಶಾಲೆಯ ಮೂಲಸೌಕರ್ಯ ಪರಿಶೀಲನೆ ಹಾಗೂ ಎಂಟು ಗ್ರಾಮಗಳಲ್ಲಿ ವಸತಿರಹಿತರಿಗೆ ಆಶ್ರಯ ಯೋಜನೆಯಲ್ಲಿ ಮನೆ ನೀಡಲು ಭೂಮಿಪೂಜೆ ನೆರವೇರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಟಿ.ಸಿ. ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಆರ್. ಓಬಳರಾಜು, ನಾಗರಾಜು, ಎ.ಡಿ. ಬಲರಾಮಯ್ಯ, ನಂದೀಶ್, ತಹಶೀಲ್ದಾರ್ ವಿ.ಎಂ. ಗೋವಿಂದರಾಜು, ಇಒ ಎಸ್. ಶಿವಪ್ರಕಾಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಅಶ್ವತ್ಥ್, ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್. ದಿನೇಶ್, ಯುವ ಅಧ್ಯಕ್ಷ ವಿನಯ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರಾದ ಕೆ.ವಿ. ಮಂಜುನಾಥ್, ಸೈಯದ್ ಸೈಫ್ ಉಲ್ಲಾ, ಎಚ್.ಎಂ. ರುದ್ರಪ್ರಸಾದ್, ಗಣೇಶ್, ಮಂಜುನಾಥ್, ಮುಕ್ತಿಯಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.