ADVERTISEMENT

ತುಮಕೂರು | ನಸಾಗಿಯೇ ಉಳಿದ 24X7 ನೀರು ಯೋಜನೆ

71,425 ನಲ್ಲಿ ಸಂಪರ್ಕ, 985 ಕಿ.ಮೀ ಪೈಪ್‌ಲೈನ್‌; ₹301 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 5:23 IST
Last Updated 4 ಅಕ್ಟೋಬರ್ 2025, 5:23 IST
ತುಮಕೂರಿನ ಅಶೋಕ ನಗರದ ಮನೆಯಲ್ಲಿ ನಲ್ಲಿಗೆ ಕಲ್ಲು ಇಟ್ಟಿರುವುದು
ತುಮಕೂರಿನ ಅಶೋಕ ನಗರದ ಮನೆಯಲ್ಲಿ ನಲ್ಲಿಗೆ ಕಲ್ಲು ಇಟ್ಟಿರುವುದು   

ತುಮಕೂರು: ನಗರದಲ್ಲಿ 24X7 ನೀರು ಸರಬರಾಜು ಯೋಜನೆ ಹಳಿ ತಪ್ಪಿದ್ದು, ನಿರಂತರ ಪೂರೈಕೆ ಕನಸಾಗಿಯೇ ಉಳಿದಿದೆ. ಹಲವು ಕಡೆ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿಲ್ಲ!

ಸಮರ್ಪಕವಾಗಿ ನೀರು ಒದಗಿಸುವ ಉದ್ದೇಶದಿಂದ 2016ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ವ್ಯಾಪ್ತಿಗೆ ಯೋಜನೆ ವಹಿಸಲಾಗಿತ್ತು. ಒಟ್ಟು ಮೂರು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2023ರಲ್ಲಿ ಕೆಲಸ ಪೂರ್ಣಗೊಂಡಿದ್ದು, ಪ್ರತಿ ಮನೆಗೆ ನೀರು ಮಾತ್ರ ಹರಿಯುತ್ತಿಲ್ಲ. ಮನೆ ಮನೆಗೆ ನೀರು ನೀಡುವ ಉದ್ದೇಶದಿಂದ ₹301 ಕೋಟಿ ವೆಚ್ಚ ಮಾಡಲಾಗಿದೆ. ಯೋಜನೆಯಡಿ ಅಳವಡಿಸಿದ ನಲ್ಲಿ, ಪೈಪ್‌ಗಳು ಈಗಾಗಲೇ ಹಾಳಾಗಿ ಮೂಲೆ ಸೇರಿವೆ.

ನಿರಂತರ ನೀರು ಸರಬರಾಜು ಯೋಜನೆ, ಅಮೃತ್‌ ಯೋಜನೆ, ಅಮೃತ್‌ ಹೆಚ್ಚುವರಿ ಅನುದಾನದಡಿ ಕಾಮಗಾರಿ ನಡೆಸಲಾಗಿದೆ. 71,425 ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ನಗರದಾದ್ಯಂತ 985 ಕಿ.ಮೀ ಹೊಸದಾಗಿ ಪೈಪ್‌ಲೈನ್‌ ಮಾಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 44 ನೀರಿನ ಟ್ಯಾಂಕ್‌ಗಳಿವೆ. ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಇವುಗಳನ್ನು 37 ಡಿಎಂಎ (ಡಿಸ್ಟ್ರಿಕ್‌ ಮೀಟರ್‌ ಏರಿಯಾ) ಎಂದು ವಿಭಾಗಿಸಿ, ಪ್ರತಿ ಟ್ಯಾಂಕ್‌ನಿಂದ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ರೂಪಿಸಿದ್ದರು.

ADVERTISEMENT

13 ಕಡೆ ನೀರು ಬಂದ್‌: ಪ್ರಸ್ತುತ 37 ಡಿಎಂಎ ಪೈಕಿ 13 ಕಡೆಯಿಂದ (ಟ್ಯಾಂಕ್‌) 24X7 ನಲ್ಲಿಗಳಿಗೆ ನೀರು ಹೋಗುತ್ತಿಲ್ಲ. ಪ್ರಮುಖವಾಗಿ ಅಶೋಕ ನಗರ, ಕ್ಯಾತ್ಸಂದ್ರ, ಚಿಕ್ಕಪೇಟೆ, ಶಿಶುವಿಹಾರ, ಗೋಕುಲ ಬಡಾವಣೆ, ಸದಾಶಿವನಗರ, ಗಾಂಧಿನಗರ, ರಾಜೀವ್‌ಗಾಂಧಿ ನಗರ, ಗಂಗೋತ್ರಿ ರಸ್ತೆ, ಎಸ್‌.ಎಸ್‌.ಪುರಂ, ವಿದ್ಯಾನಗರ, ಎಸ್‌ಐಟಿ ಭಾಗದಲ್ಲಿ ತುಂಬಾ ಸಮಸ್ಯೆಯಾಗುತ್ತಿದೆ. ಈ ಭಾಗದ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ ಅಗೆಯುವಾಗ ಪೈಪ್‌ಲೈನ್‌ಗೆ ಹಾನಿಯಾಗಿದೆ. ಚರಂಡಿ, ಯುಜಿಡಿ ಕಾಮಗಾರಿ ಸಮಯದಲ್ಲೂ ಪೈಪ್‌ ಹಾಳಾಗಿದೆ. ಇದರ ಜತೆಗೆ ಕಾಮಗಾರಿ ವೇಳೆ ಕಳಪೆ ಗುಣಮಟ್ಟದ ನಲ್ಲಿ, ಪೈಪ್‌ ಬಳಸಿದ ಪರಿಣಾಮ ಕೆಲವೇ ದಿನಗಳಲ್ಲಿ ಹಾಳಾಗಿ ನಿಂತಿವೆ.

ಕೊಳಚೆ ನೀರು ಪೂರೈಕೆ: ‘ಶಾಂತಿ ನಗರದ ಮನೆಗಳಿಗೆ ಕೊಳಚೆ ನೀರು ಪೂರೈಸಲಾಗುತ್ತಿದೆ. ನಲ್ಲಿಯಲ್ಲಿ ನೀರು ಬರುವ ಪ್ರತಿ ಸಾರಿ ಇದು ಸಾಮಾನ್ಯವಾಗಿದೆ. ಇದರಿಂದ ಅನೇಕ ರೋಗಗಳು ಹರಡುತ್ತಿವೆ’ ಎಂದು ಇಲ್ಲಿನ ನಿವಾಸಿ ದುರುಗಮ್ಮ ಹೇಳುತ್ತಾರೆ.

ಬುಗುಡನಹಳ್ಳಿ ನೀರು ನಗರಕ್ಕೆ ಪೂರೈಸಲಾಗುತ್ತದೆ. ಅಲ್ಲಿಂದ ಪಿಎನ್‌ಆರ್‌ ಪಾಳ್ಯದ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿದ ನಂತರವೇ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಆದರೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ಶಾಂತಿನಗರದ ಮನೆಯೊಂದರ ನಲ್ಲಿ ಮುರಿದಿರುವುದು
ಎಚ್‌.ಮಲ್ಲಿಕಾರ್ಜುನ
ಕವಿತಾ
ಶಿವಮ್ಮ
ಅರುಣ್‌

2016ರಲ್ಲಿ ಯೋಜನೆಗೆ ಚಾಲನೆ 2023ರಲ್ಲಿ ಕಾಮಗಾರಿ ಮುಕ್ತಾಯ ಪಾಲಿಕೆ ವ್ಯಾಪ್ತಿಯಲ್ಲಿ 44 ಟ್ಯಾಂಕ್‌

ವಾರ್ಡ್‌ನಲ್ಲಿ ₹10 ಕೋಟಿ ಲೋಪ
ಪ್ರತಿ ವಾರ್ಡ್‌ನಲ್ಲಿ ₹5 ಕೋಟಿಯಿಂದ ₹10 ಕೋಟಿ ಅವ್ಯವಹಾರವಾಗಿದೆ. ಲೋಕಾಯುಕ್ತ ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಮಲ್ಲಿಕಾರ್ಜುನ ಒತ್ತಾಯಿಸಿದರು. ಯಾವುದೇ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಯೋಜನೆಯಡಿ ಅಳವಡಿಸಿದ ಪೈಪ್‌ ಎರಡೇ ವರ್ಷಕ್ಕೆ ಕಿತ್ತು ಬಂದಿವೆ. ಕಳಪೆ ಸಾಮಗ್ರಿ ಬಳಸಲಾಗಿದೆ. ಅಶೋಕ‌ ನಗರದಲ್ಲಿ ಪ್ರಾರಂಭದಲ್ಲಿ ನೀರು ಸಿಕ್ಕಿದ್ದು ಬಿಟ್ಟರೆ ಮತ್ತೆ ನಲ್ಲಿಯಲ್ಲಿ ನೀರು ಬರುತ್ತಿಲ್ಲ. ಒಂದೆರಡು ಕಡೆ ಹೊರತುಪಡಿಸಿದರೆ ಉಳಿದೆಡೆ ಯೋಜನೆ ಕೆಲಸ ಸಮರ್ಪಕವಾಗಿ ನಡೆದಿಲ್ಲ ಎಂದರು.
5 ದಿನಕ್ಕೊಮ್ಮೆ ನೀರು
ಶಾಂತಿನಗರ ಭಾಗದಲ್ಲಿ ಐದು ದಿನಕ್ಕೊಮ್ಮೆ ಕೆಲವು ಸಲ ವಾರಕ್ಕೊಮ್ಮೆ ನೀರು ಬರುತ್ತದೆ. ಈ ಭಾಗದ ಮನೆಗಳಲ್ಲಿ ಸಂಪ್‌ ವ್ಯವಸ್ಥೆ ಇಲ್ಲ. ಹೀಗಾಗಿ ಹೆಚ್ಚುವರಿ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ. ಸ್ಥಳೀಯರು ನಲ್ಲಿಯಲ್ಲಿ ನೀರು ಬರುವ ತನಕ ಕಾಯಬೇಕಾದ ಪರಿಸ್ಥಿತಿ ಇದೆ. ನಿರಂತರ ನೀರು ಸರಬರಾಜು ಮಾಡುವ ಉದ್ದೇಶದಿಂದ ನಲ್ಲಿ ಸಂಪರ್ಕ ಕಲ್ಪಿಸಿ ಎರಡರಿಂದ ಮೂರು ವರ್ಷ ಕಳೆದರೂ ನೀರು ಮಾತ್ರ ಬರುತ್ತಿಲ್ಲ. ನಲ್ಲಿ ಹಾಳಾದ ನಂತರ ಜನರೇ ಸರಿ ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ವಾಟರ್‌ಮ್ಯಾನ್‌ಗಳು ನಮ್ಮ ಮಾತು ಕೇಳುವುದಿಲ್ಲ. ಸಮಸ್ಯೆ ಯಾರ ಬಳಿ ಹೇಳಬೇಕು? ಎಂದು ಮಂಜುನಾಥ್‌ ಪ್ರಶ್ನಿಸಿದರು.
3 ಗಂಟೆ ಪೂರೈಕೆ
ಕೆಲವು ಸಲ ನಾಲ್ಕೈದು ದಿನಕ್ಕೊಮ್ಮೆ ನೀರು ಬರುತ್ತದೆ. ಅದು ಕೂಡ 2ರಿಂದ 3 ಗಂಟೆ ಮಾತ್ರ ನಲ್ಲಿಯಲ್ಲಿ ನೀರು ಇರುತ್ತದೆ. ಇದಾದ ಮೇಲೆ ಯಾರಿಗೆ ಹೇಳಿದರೂ ನೀರು ಮಾತ್ರ ಬರಲ್ಲ. ನೀರಿನ ಆಪರೇಟರ್‌ ಕರೆ ಸ್ವೀಕರಿಸುವುದಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗಡೆ ಬರುವುದಿಲ್ಲ. ಕವಿತಾ ಶಾಂತಿನಗರ ** ಕಲುಷಿತ ನೀರು ಕನಿಷ್ಠ ಹಬ್ಬ–ಹರಿದಿನದ ಸಮಯದಲ್ಲಾದರೂ ಸಮರ್ಪಕವಾಗಿ ನೀರು ಕೊಡಬೇಕು. ಅದಕ್ಕೂ ಸ್ಪಂದನೆ ನೀಡದಿದ್ದರೆ ಅಧಿಕಾರಿಗಳು ಇದ್ದು ಏನು ಪ್ರಯೋಜನ. ನೀರು ಶುದ್ಧವಾಗಿ ಇರುವುದಿಲ್ಲ. ತುಂಬಾ ಸಲ ಕಲುಷಿತ ನೀರು ಸರಬರಾಜು ಮಾಡುತ್ತಾರೆ. ಶಿವಮ್ಮ ಶಾಂತಿನಗರ ** ಗುಣಮಟ್ಟ ಪರಿಶೀಲಿಸಿ ನಲ್ಲಿಯಲ್ಲಿ ಬರುವ ನೀರಿನ ಗುಣಮಟ್ಟ ಪರಿಶೀಲಿಸಬೇಕು. ಪೈಪ್‌ ಮೂಲಕ ನೀರು ಹರಿಸಲಾಗುತ್ತಿದೆ. ಎಲ್ಲಾದರೂ ಪೈಪ್‌ ಒಡೆದಿದ್ದರೆ ಕಲುಷಿತ ನೀರು ಸೇರಿಕೊಳ್ಳುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಜನರ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅರುಣ್‌ ಕೋತಿತೋಪು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.