ತುಮಕೂರು: ಯಾವುದೇ ಮುಂದಾಲೋಚನೆ ಇಲ್ಲದೆ, ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದರೆ ಸಾರ್ವಜನಿಕರು ಯಾವ ರೀತಿಯಲ್ಲಿ ಬಳಲುತ್ತಾರೆ, ಸಂಕಷ್ಟ ಅನುಭವಿಸುತ್ತಾರೆ ಎನ್ನುವುದಕ್ಕೆ ನಗರದ ಸೇತುವೆಗಳು, ಪ್ರಮುಖ ರಸ್ತೆಗಳು ಉತ್ತಮ ಉದಾಹರಣೆಯಾಗಿವೆ.
ಅಂತರಸನಹಳ್ಳಿ, ಶೆಟ್ಟಿಹಳ್ಳಿ, ಕುಣಿಗಲ್ ರಸ್ತೆಯ ಕೆಳ ಸೇತುವೆಗಳು, ಕೋತಿತೋಪು ಮುಖ್ಯರಸ್ತೆ ಮಳೆ ಬಂದರೆ ನದಿಯಂತೆ ಭಾಸವಾಗುತ್ತದೆ. ಪ್ರತಿ ಮಳೆಗಾಲದಲ್ಲಿ ವಾಹನ ಸವಾರರ ಪರದಾಟ ತಪ್ಪುತ್ತಿಲ್ಲ. ಕಾಮಗಾರಿ ಮುಗಿದ ವರ್ಷದಿಂದ ಒಂದಲ್ಲೊಂದು ಕಡೆ ಸಮಸ್ಯೆಯಾಗುತ್ತಿದೆ. ‘ನೀರು ನಿಲ್ಲುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಿಂತ ನೀರನ್ನು ಆಚೆ ಹಾಕಲು ಒದ್ದಾಡುತ್ತಾರೆ. ವೈಜ್ಞಾನಿಕವಾಗಿ ಕಾಮಗಾರಿ ಮಾಡದ ಕಾರಣಕ್ಕೆ ಈಗ ಸಂಕಷ್ಟ ಎದುರಾಗಿದೆ’ ಎಂದು ಶೆಟ್ಟಿಹಳ್ಳಿ ರಾಮಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ, ಅಭಿವೃದ್ಧಿ ಪಡಿಸಿರುವ ಸೇತುವೆಗಳು ಕೆಲವೇ ವರ್ಷಗಳಿಗೆ ಬಳಕೆಗೆ ಬಾರದಂತಾಗುತ್ತಿವೆ. ಹೆದ್ದಾರಿಯಲ್ಲಿ ನಿರ್ಮಿಸಿರುವ ಅಂತರಸನಹಳ್ಳಿ ಕೆಳ ಸೇತುವೆ ಮಳೆಗಾಲದಲ್ಲಿ ಸದಾ ನೀರಿನಿಂದ ಆವೃತವಾಗಿರುತ್ತದೆ. ಒಂದು ಸಣ್ಣ ಮಳೆ ಸುರಿದರೂ ಕೆರೆಯಂತೆ ಗೋಚರಿಸುತ್ತದೆ. ವಾಹನಗಳ ಓಡಾಟಕ್ಕೆ ಸಾಧ್ಯವೇ ಇಲ್ಲ ಎನ್ನುವಂತಾಗುತ್ತದೆ. ಜನ ನೀರು ಕಡಿಮೆಯಾಗುವ ತನಕ ರಸ್ತೆಯ ಬದಿಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಯಲ್ಲಾಪುರ, ಅಂತರಸನಹಳ್ಳಿ ಮಾರುಕಟ್ಟೆ, ಕೈಗಾರಿಕಾ ಪ್ರದೇಶ ಮತ್ತು ನಗರ ಸೇರಿದಂತೆ ನಾಲ್ಕು ಕಡೆಯ ನೀರು ಸೇತುವೆಯ ರಸ್ತೆಗೆ ಹರಿಯುತ್ತದೆ.
ಹಿಂದೆ ಈ ಭಾಗದ ನೀರು ಅಂತರಸನಹಳ್ಳಿ ಬಳಿಯ ಹುಣಸೆ ಕಟ್ಟೆಗೆ ಹರಿಯುತ್ತಿತ್ತು. ಕಟ್ಟೆಯಿಂದ ಅಮಾನಿಕೆರೆ ಸೇರುತ್ತಿತ್ತು. ಮಾರುಕಟ್ಟೆ, ಸ್ಮಶಾನ, ಕೆಎಸ್‌ಆರ್‌ಟಿಸಿ ಡಿಪೊ ಕಟ್ಟೆಯ ಜಾಗವನ್ನು ನುಂಗಿ ಹಾಕಿದೆ. ಈಗ ನೀರು ಹರಿಯಲು ಯಾವುದೇ ವ್ಯವಸ್ಥೆ ಇಲ್ಲ. 3 ರಾಜ ಕಾಲುವೆಗಳು ಒತ್ತುವರಿಯಾಗಿವೆ. ಚರಂಡಿ ಮಣ್ಣು, ಗಿಡಗಳಿಂದ ಮುಚ್ಚಿ ಹೋಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದಾಗಿ ಮಳೆ ನೀರು ಅಂತರಸನಹಳ್ಳಿ ಸೇತುವೆ ಬಳಿ ಸಂಗ್ರಹವಾಗುತ್ತದೆ.
‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವೈಜ್ಞಾನಿಕವಾಗಿ ಅಂತರಸನಹಳ್ಳಿ ಸೇತುವೆ ನಿರ್ಮಾಣ ಮಾಡಿಲ್ಲ. ಭವಿಷ್ಯದ ಬಗ್ಗೆ ಯೋಚಿಸಿ ಯೋಜನೆ ರೂಪಿಸಿದ್ದರೆ ಈಗ ಜನರಿಗೆ ಕಷ್ಟ ಆಗುತ್ತಿರಲಿಲ್ಲ. ಮುಂದಿನ ಸಮಸ್ಯೆಗಳ ಬಗ್ಗೆ ಯೋಚಿಸದೆ, ಹಣ ಲೂಟಿ ಮಾಡಲು ಕಾಮಗಾರಿ ಮುಗಿಸಿದಂತೆ ಕಾಣುತ್ತಿದೆ’ ಎಂದು ಅಂತರಸನಹಳ್ಳಿಯ ಪ್ರಸನ್ನ ದೂರಿದರು.
ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿರುವ ಶೆಟ್ಟಿಹಳ್ಳಿ ಕೆಳ ಸೇತುವೆ ಅಧಿಕಾರಿಗಳ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ. ಕಾಮಗಾರಿ ಹೇಗೆ ನಡೆಸಬಾರದು ಎಂಬುವುದಕ್ಕೆ ಒಂದು ಸೂಕ್ತ ನಿದರ್ಶನವಾಗಿದೆ. ಮಳೆ ಬಂದರೆ ವಾಹನಗಳ ಸಂಚಾರ ಸಂಪೂರ್ಣ ಬಂದ್. ಮಳೆಯಾದ ಪ್ರತಿ ಸಾರಿಯೂ ಇಲ್ಲಿ ನೀರು ನಿಂತು ಸೇತುವೆ ಅಕ್ಕಪಕ್ಕದ ರಸ್ತೆಗಳು ಬಿರುಕು ಬಿಡುತ್ತಿವೆ. ಈಚೆಗೆ ಸೇತುವೆ ಮೇಲು ಭಾಗದ ಸರ್ವೀಸ್ ರಸ್ತೆಯಲ್ಲಿ ಗುಂಡಿ ಬಿದ್ದು ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಕಾಮಗಾರಿ ನಡೆಸುವಾಗ ನೀರು ಸಮರ್ಪಕವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಈಗ ಸೇತುವೆ ಬಳಿ ಸಂಗ್ರಹವಾಗುವ ನೀರು ಆಚೆ ಹಾಕಲು ಪಂಪ್ ಸೆಟ್ ಅಳವಡಿಸಲಾಗಿದೆ. ಚರಂಡಿ ಸೂಕ್ತ ರೀತಿಯಲ್ಲಿ ಇಲ್ಲದ ಕಾರಣಕ್ಕೆ ಇಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗುತ್ತಿದೆ.
ನಗರದ ಕೆಇಬಿ ಕಚೇರಿ ಮುಂಭಾಗ ಕೋತಿತೋಪು ಮುಖ್ಯರಸ್ತೆಯಲ್ಲಿ ಮಳೆ ನೀರು ನಿಂತು ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತಿದೆ. ಮುಖ್ಯರಸ್ತೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಅಮಾನಿಕೆರೆಗೆ ಮಳೆ ನೀರು ಹರಿಯುತ್ತಿಲ್ಲ. ಒಂದೆಡೆ ಕಲುಷಿತ ನೀರು ಕೆರೆಯ ಒಡಲು ಸೇರುತ್ತಿದ್ದರೆ ಮತ್ತೊಂದೆಡೆ ಮಳೆ ನೀರು ಕೆರೆಗೆ ಹರಿಯದೇ ರಸ್ತೆಯಲ್ಲೇ ನಿಲ್ಲುತ್ತಿದೆ. ‘ಅಧಿಕಾರಿಗಳು ನೀರು ನಿಂತಾಗ ಸ್ಥಳ ಪರಿಶೀಲನೆ ನಡೆಸಿ ಸುಮ್ಮನಾಗುತ್ತಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ವಾಹನ ಸವಾರರ ಕಷ್ಟ ಯಾರಿಗೂ ಅರ್ಥವಾಗುವುದಿಲ್ಲ. ಇದುವರೆಗೆ ಅನೇಕ ವಾಹನಗಳು ನೀರಿನಲ್ಲಿ ಕೆಟ್ಟು ನಿಂತಿವೆ’ ಎಂದು ನಗರದ ಮಂಜೇಶ್ ಪ್ರತಿಕ್ರಿಯಿಸಿದರು. ನಿತ್ಯ ನೂರಾರು ಜನ ಓಡಾಡುವ ಸದಾ ವಾಹನ ದಟ್ಟಣೆ ಇರುವ ಕುಣಿಗಲ್ ರಸ್ತೆಯ ರೈಲ್ವೆ ಕೆಳ ಸೇತುವೆಯ ಸ್ಥಿತಿಯೂ ಹೀಗೆ ಇದೆ. ಮಳೆ ನೀರು ನಿಲ್ಲುವುದರಿಂದ ರಸ್ತೆಯಲ್ಲಿ ಓಡಾಡುವ ಜನ ಭಯದಲ್ಲೇ ಮುಂದೆ ಸಾಗುತ್ತಿದ್ದಾರೆ. ಇದರಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅಂತರಸನಹಳ್ಳಿ ಸೇತುವೆ ಬಳಿ ಮೊಳಕಾಲುದ್ದ ಗುಂಡಿಗಳು ಬಿದ್ದಿದ್ದು ಮಳೆ ಬಂದಾಗ ಗಮನಿಸದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುತ್ತಾರೆ. ಎರಡು ದಿನಗಳ ನಂತರ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕುಜಯರಾಮ್ ಆಟೊ ಚಾಲಕ ಅಂತರಸನಹಳ್ಳಿ
ವಾಹನ ಓಡಾಟಕ್ಕೆ ಸಮಸ್ಯೆ ಸೇತುವೆ ನಿರ್ಮಾಣವಾದ ದಿನದಿಂದ ಇಲ್ಲಿ ಸಮಸ್ಯೆಯಾಗುತ್ತಿದೆ. ವಾಹನಗಳು ಮುಂದೆ ಸಾಗಲು ಆಗದಷ್ಟು ನೀರು ನಿಲ್ಲುತ್ತದೆ. ಅಂತರಸನಹಳ್ಳಿ ಸೇತುವೆ ಬಳಿ ಯಾವುದೇ ಚರಂಡಿ ರಾಜ ಕಾಲುವೆ ಇಲ್ಲ. ನಾಲ್ಕು ಕಡೆಯ ನೀರು ತಗ್ಗು ಪ್ರದೇಶವಾದ ಸೇತುವೆ ಹತ್ತಿರ ನಿಲ್ಲುತ್ತಿದೆ. ಇದರಿಂದಲೇ ಸಾಕಷ್ಟು ತೊಂದರೆಯಾಗುತ್ತಿದೆ.ಸಿದ್ದಗಂಗಯ್ಯ ಅಂತರಸನಹಳ್ಳಿ
ನೀರು ಸರಾಗವಾಗಿ ಹರಿಯಬೇಕು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿದರೆ ಜನರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಯಲ್ಲಾಪುರದ ನೀರು ಸೇತುವೆ ಬಳಿಗೆ ಹರಿದು ಬರುತ್ತಿದೆ. ಚರಂಡಿ ಮಾಯವಾಗಿರುವ ರಾಜ ಕಾಲುವೆ ದುರಸ್ತಿ ಮಾಡಬೇಕು.ಪುರುಷೋತ್ತಮ ಅಂತರಸನಹಳ್ಳಿ
ಸಾವಿರಾರು ಜನರಿಗೆ ತೊಂದರೆ ಮಳೆಗಾಲದಲ್ಲಿ ಬಂದು ಹೋಗುವ ಅಧಿಕಾರಿಗಳು ನಂತರದ ದಿನಗಳಲ್ಲಿ ಈ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ಬೇಸಿಗೆ ಸಮಯದಲ್ಲಿ ಯೋಜನೆ ರೂಪಿಸಿ ನೀರು ನಿಲ್ಲದಂತೆ ತಡೆಯಲು ಕಾಮಗಾರಿ ಕೈಗೊಳ್ಳಬೇಕು. ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶೆಟ್ಟಿಹಳ್ಳಿ ಸೇತುವೆ ಸಂಪರ್ಕ ಕಡಿತವಾದರೆ ಸಾವಿರಾರು ಜನರು ತೊಂದರೆಗೆ ಒಳಗಾಗುತ್ತಾರೆ.ಆರ್.ಲೋಕೇಶ್ ಶೆಟ್ಟಿಹಳ್ಳಿ
ಸಮಸ್ಯೆ ಬಗೆಹರಿಸಲಿ ಶೆಟ್ಟಿಹಳ್ಳಿ ಸೇತುವೆಯಲ್ಲಿ ನೀರು ನಿಂತಾಗ ಪಂಪ್ ಸೆಟ್ ಸಹಾಯದಿಂದ ಖಾಲಿ ಮಾಡಿಸುತ್ತಾರೆ. ಹಲವು ದಿನಗಳಿಂದ ಇದೇ ರೀತಿ ಆಗುತ್ತಿದೆ. ಈ ಸೇತುವೆ ಬಳಿ ವಾಹನ ಸಂಚಾರಕ್ಕೆ ಯಾವಾಗ ನಿರ್ಬಂಧ ಇರುತ್ತದೆ ಯಾವಾಗ ಮುಕ್ತವಾಗಿರುತ್ತದೆ ಎಂಬುವುದೇ ತಿಳಿಯುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹಾರ ಕಲ್ಪಿಸಲು ಮುಂದಾಗಬೇಕು.ದಿಲೀಪ್ ಶೆಟ್ಟಿಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.