ADVERTISEMENT

ತುಮಕೂರು: ಬಟವಾಡಿ– ಮಲ್ಲಸಂದ್ರ ವೈಟ್ ಟಾಪಿಂಗ್

₹85.48 ಕೋಟಿ ವೆಚ್ಚ; ಷತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 5:53 IST
Last Updated 25 ಜನವರಿ 2026, 5:53 IST
ತುಮಕೂರು ಹೊರ ವಲಯದ ಹೆಗ್ಗೆರೆಯಲ್ಲಿ ಶನಿವಾರ ಬಟವಾಡಿ– ಮಲ್ಲಸಂದ್ರ ನಡುವಿನ ವೈಟ್ ಟಾಪಿಂಗ್ ಕಾಮಗಾರಿಗೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಮೊದಲಾದವರು ಉಪಸ್ಥಿತರಿದ್ದರು
ತುಮಕೂರು ಹೊರ ವಲಯದ ಹೆಗ್ಗೆರೆಯಲ್ಲಿ ಶನಿವಾರ ಬಟವಾಡಿ– ಮಲ್ಲಸಂದ್ರ ನಡುವಿನ ವೈಟ್ ಟಾಪಿಂಗ್ ಕಾಮಗಾರಿಗೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್ ಮೊದಲಾದವರು ಉಪಸ್ಥಿತರಿದ್ದರು   

ತುಮಕೂರು: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ಬಟವಾಡಿ– ಮಲ್ಲಸಂದ್ರ ನಡುವಿನ 12 ಕಿ.ಮೀ ರಸ್ತೆಯ ವೈಟ್ ಟಾಪಿಂಗ್ ಹಾಗೂ ದ್ವಿಪಥವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ನಗರದ ಹೊರ ವಲಯದ ಹೆಗ್ಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗುದ್ದಲಿಪೂಜೆ ನೆರವೇರಿಸಿದರು. ₹85.48 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಮೂರು ತಿಂಗಳಲ್ಲಿ ಮುಗಿಸುವಂತೆ ಗಡುವು ನೀಡಲಾಗಿದೆ.

ನಂತರ ಮಾತನಾಡಿದ ಸೋಮಣ್ಣ, ‘ಒಮ್ಮೆ ಶಾಲೆ ಮಗುವಿಗೆ ಅಪಘಾತವಾಗಿದ್ದನ್ನು ಗಮನಿಸಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಸಚಿವರು ₹85.48 ಕೋಟಿ ಹಣ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ಮುಂದಿನ ದಿನಗಳಲ್ಲಿ ಹೆಗ್ಗೆರೆಯನ್ನು ಒಂದು ನಗರವಾಗಿ ಅಭಿವೃದ್ಧಿ‍ ಪಡಿಸಲಾಗುವುದು. ತುಮಕೂರಿಗೆ ಮೆಟ್ರೊ ರೈಲು ತರಲು ಸಚಿವ ಪರಮೇಶ್ವರ ಪ್ರಯತ್ನ ನಡೆಸಿದ್ದಾರೆ. ರೈಲ್ವೆ ಹಾಗೂ ರಸ್ತೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು ಎಂದರು.

ತುಮಕೂರು– ಬೆಂಗಳೂರು ನಡುವಿನ ದ್ವಿಪಥ ರೈಲ್ವೆ ಮಾರ್ಗವನ್ನು ಚತುಷ್ಪಥ ಮಾರ್ಗವನ್ನಾಗಿ ವಿಸ್ತರಿಸುವ ಪ್ರಯತ್ನ ನಡೆದಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ರೈಲ್ವೆ ಮೇಲು ಸೇತುವೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿದ್ದ ಭೂ ಸ್ವಾಧೀನ ಕಚೇರಿಯನ್ನು ತುಮಕೂರಿಗೆ ಸ್ಥಳಾಂತರಿಸಲಾಗಿದೆ. ಇಎಸ್‌ಐ ಆಸ್ಪತ್ರೆ ಮಂಜೂರಾಗಿದ್ದು, ಅದಕ್ಕಾಗಿ ಐದು ಎಕರೆ ಜಾಗ ಬೇಕಾಗಿದೆ. ಇನ್ನು ಎರಡು ವರ್ಷಗಳಲ್ಲಿ ತುಮಕೂರು ನಗರದ ಚಿತ್ರಣವೇ ಬದಲಾಗಲಿದ್ದು, ರಿಯಲ್ ಎಸ್ಟೇಟ್ ಚಟುವಟಿಕೆಗಳು ಚುರುಕಾಗಲಿವೆ. ಯಾರೂ ರಸ್ತೆ ಕಾಮಗಾರಿಗೆ ಅಡ್ಡಿಪಡಿಸಬಾರದು ಎಂದು ಕೇಳಿಕೊಂಡರು.

ಶಾಸಕ ಬಿ.ಸುರೇಶ್‌ಗೌಡ, ‘ಕೆಲಸ ಮಾಡುವುದು ಹೇಗೆ ಎಂಬುದನ್ನು ಸೋಮಣ್ಣ ಅವರನ್ನು ನೋಡಿ ಕಲಿಯಬೇಕಿದೆ. ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಕೊಡಿಸಿದ್ದಾರೆ. ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ₹200 ಕೋಟಿ ಬಿಡುಗಡೆಯಾಗಿದೆ. ತುಮಕೂರು– ರಾಯದುರ್ಗ, ತುಮಕೂರು– ದಾವಣಗೆರೆ ರೈಲ್ವೆ ಯೋಜನೆ ಮುಂದಿನ ವರ್ಷ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡರಾದ ಎಚ್.ಎಸ್.ರವಿಶಂಕರ್, ಜಯಂತಗೌಡ, ನರಸಿಂಹಮೂರ್ತಿ, ವೈ.ಎಚ್.ಹುಚ್ಚಯ್ಯ, ಶಿವಪ್ರಸಾದ್, ಶಂಕರ್, ಬೆಳಗುಂಬ ಸ್ವಾಮಿ, ಆಂಜಿನಪ್ಪ ಮೊದಲಾದವರು ಪಾಲ್ಗೊಂಡಿದ್ದರು.