ADVERTISEMENT

ಲೇಖನ ಹೆಚ್ಚಿಸಿದಷ್ಟು ಕನ್ನಡ ಗಟ್ಟಿ: ಯು.ಬಿ.ಪವನಜ

ಕನ್ನಡ ವಿಕಿಪೀಡಿಯಾ ಸಂಪಾದನೋತ್ಸವ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 16:02 IST
Last Updated 5 ಅಕ್ಟೋಬರ್ 2019, 16:02 IST
‘ಕನ್ನಡ ವಿಕಿಪೀಡಿಯಾ ಸಂಪಾದನೋತ್ಸವ’ದಲ್ಲಿ ಕುಲಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿದರು. ಕೆ.ಎನ್.ಗಂಗಾನಾಯಕ್, ಯು.ಬಿ.ಪವನಜ, ಕೆ.ರಾಮಚಂದ್ರಪ್ಪ, ಕೆ.ಟಿ.ಧನಲಕ್ಷ್ಮೀ ಇದ್ದಾರೆ.
‘ಕನ್ನಡ ವಿಕಿಪೀಡಿಯಾ ಸಂಪಾದನೋತ್ಸವ’ದಲ್ಲಿ ಕುಲಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿದರು. ಕೆ.ಎನ್.ಗಂಗಾನಾಯಕ್, ಯು.ಬಿ.ಪವನಜ, ಕೆ.ರಾಮಚಂದ್ರಪ್ಪ, ಕೆ.ಟಿ.ಧನಲಕ್ಷ್ಮೀ ಇದ್ದಾರೆ.   

ತುಮಕೂರು: ಅಂತರ್ಜಾಲದಲ್ಲಿ ಎಲ್ಲ ಕ್ಷೇತ್ರಗಳ ಕುರಿತಾದ ತಾಂತ್ರಿಕ ಜ್ಞಾನ ಹೆಚ್ಚು ಲಭ್ಯವಾಗುವಂತೆ ಮಾಡುವ ಅವಶ್ಯಕತೆ ಇದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್.ಸಿದ್ದೇಗೌಡ ತಿಳಿಸಿದರು.

ತುಮಕೂರು ವಿ.ವಿ. ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಕರಾವಳಿ ವಿಕಿಮೀಡಿಯನ್ಸ್ ಹಾಗೂ ವಿಕಿವಿಮೆನ್ಸ್ ಮಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ‘ಕನ್ನಡ ವಿಕಿಪೀಡಿಯ ಸಂಪಾದನೋತ್ಸವ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಸಮಾಜಕ್ಕೆ ಹೊಂದಿಕೊಳ್ಳಬೇಕಾದರೆ ಬದಲಾವಣೆಗೆ ಸಿದ್ಧರಾಗಬೇಕು. ಅಂತರ್ಜಾಲದಲ್ಲಿನ ವೈವಿಧ್ಯಮಯ ಮಾಹಿತಿಗಳು ಕನ್ನಡದಲ್ಲಿಯೇ ದೊರೆಯಬೇಕು. ಉತ್ಸಾಹಿ ಯುವ ಸಮೂಹ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ADVERTISEMENT

ಅಂಕಣಕಾರ ಯು.ಬಿ.ಪವನಜ, ಪ್ರತಿ ತಿಂಗಳು ಸುಮಾರು 23 ಲಕ್ಷ ಮಂದಿ ಕನ್ನಡ ವಿಕಿಪೀಡಿಯ ವೀಕ್ಷಿಸುತ್ತಾರೆ. ಆದರೆ ಕನ್ನಡ ವಿಕಿಪೀಡಿಯದಲ್ಲಿ ಕೇವಲ 24 ಸಾವಿರ ಲೇಖನಗಳಿವೆ. ಈ ಸಂಖ್ಯೆಯನ್ನು ಹೆಚ್ಚಿಸಿದಷ್ಟೂ ಅಂತರ್ಜಾಲದಲ್ಲಿ ಕನ್ನಡ ಗಟ್ಟಿಯಾಗುತ್ತದೆ ಎಂದರು.

ಕನ್ನಡ ವಿಕಿಪೀಡಿಯಾ ಜನರಿಂದ ಜನರಿಗಾಗಿ ಇರುವ ಒಂದು ಸ್ವತಂತ್ರ ವಿಶ್ವಕೋಶ. ಕಾಲದಿಂದ ಕಾಲಕ್ಕೆ ಜ್ಞಾನಜಗತ್ತಿನಲ್ಲಿ ಆಗುವ ಬದಲಾವಣೆಗಳ ಆಧಾರದಲ್ಲಿ ತಕ್ಷಣ ಪರಿಷ್ಕರಿಸಬಹುದು. ಇದಕ್ಕೆ 1,139 ಸಂಪಾದಕರಿದ್ದರೂ ಸಕ್ರಿಯರಾಗಿರುವುದು 34 ಮಂದಿ ಮಾತ್ರ. ಕನ್ನಡದಲ್ಲಿ ಅವಶ್ಯಕತೆಯಿರುವ ಮಾಹಿತಿಗೆ ಹೋಲಿಸಿದರೆ ಇದು ತೀರಾ ಕಡಿಮೆ ಎಂದರು.

ವಿಕಿಪೀಡಿಯ ಸಂಪಾದಿಸುವುದರಿಂದ ಬರವಣಿಗೆ ಶೈಲಿ, ಸಂಶೋಧನ ಕೌಶಲ, ಭಾಷಾ ಪ್ರಭುತ್ವ ಬೆಳೆಯುತ್ತದೆ. ವಿದ್ಯಾರ್ಥಿಗಳು ಜ್ಞಾನದ ಗ್ರಾಹಕರಾಗುವುದಷ್ಟೇ ಅಲ್ಲದೆ ಜ್ಞಾನದ ಉತ್ಪಾದಕರೂ ಆಗಬೇಕು ಎಂದರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕೆ.ವಿ., ಪ್ರಸ್ತುತ ಸಂಪಾದನೋತ್ಸವದಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಭಾರತೀಯ ಭಾಷೆಗಳ ಕುರಿತ ಮಾಹಿತಿಯನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸಲಾಗುತ್ತಿದೆ ಎಂದರು.

ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲ ಕೆ.ರಾಮಚಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಕೆ.ಟಿ.ಧನಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.