ADVERTISEMENT

ತುಮಕೂರು: ಕಾಡುಗೊಲ್ಲರ ನಿಗಮ; ಹೆಸರು ಬದಲಿಗೆ ವಿರೋಧ

ಮುಖ್ಯಮಂತ್ರಿಗೆ ಶಾಸಕಿ ಪೂರ್ಣೀಮ ಶ್ರೀನಿವಾಸ್ ಪತ್ರ: ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:36 IST
Last Updated 25 ನವೆಂಬರ್ 2021, 16:36 IST
ಜಿ.ಕೆ.ನಾಗಣ್ಣ
ಜಿ.ಕೆ.ನಾಗಣ್ಣ   

ತುಮಕೂರು: ಕಾಡುಗೊಲ್ಲರ ಅಭಿವೃದ್ಧಿ ನಿಗಮವನ್ನು, ಗೊಲ್ಲ– ಕಾಡುಗೊಲ್ಲ ಅಭಿವೃದ್ಧಿ ನಿಗಮವೆಂದು ಬದಲಾಯಿಸುವಂತೆ ಮುಖ್ಯಮಂತ್ರಿಗೆ ಹಿರಿಯೂರು ಶಾಸಕಿ ಪೂರ್ಣೀಮ ಶ್ರೀನಿವಾಸ್ ಪತ್ರ ಬರೆಯುವ ಮೂಲಕ ಕಾಡುಗೊಲ್ಲರನ್ನು ಮುಗಿಸಲು ಹೊರಟ್ಟಿದ್ದಾರೆ ಎಂದು ರಾಜ್ಯ ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ನಾಗಣ್ಣ ಆರೋಪಿಸಿದರು.

ಬುಡಕಟ್ಟು ಸಂಸ್ಕೃತಿ ಹೊಂದಿರುವ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಮುಂದಿನ ದಿನಗಳಲ್ಲಿ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡದ ಜಾತಿ ಪಟ್ಟಿಗೆ ಸೇರಿಸುವ ಸಾಧ್ಯತೆ ಇದೆ. ಗೊಲ್ಲ ಸಮುದಾಯಕ್ಕೆ ಸೇರಿರುವ ಪೂರ್ಣೀಮ ಅವರು ಕಾಡುಗೊಲ್ಲರ ಹೆಸರಿನಲ್ಲಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಪದೇ ಪದೇ ನಿಗಮದ ಹೆಸರಿನಲ್ಲಿ ಹಸ್ತಕ್ಷೇಪ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ದೂರಿದರು.

ಕಾಡುಗೊಲ್ಲರು ಎಂದಿಗೂ ನಿಗಮ ಬೇಕು ಎಂದು ಕೇಳಿದವರಲ್ಲ. 2010ರಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಸಿ.ಎಸ್.ದ್ವಾರಕಾನಾಥ್ ಅಧ್ಯಯನ ನಡೆಸಿ, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಶಿರಾ ವಿಧಾನಸಭೆ ಉಪಚುನಾವಣೆ ಸಮಯದಲ್ಲಿ ಕಾಡುಗೊಲ್ಲರ ಮತ ಪಡೆಯಲು ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿ, ಹಣ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ನಿಗಮ ಸ್ಥಾಪನೆ ಆದೇಶ ಹೊರಬಿದ್ದ ಒಂದೇ ದಿನದಲ್ಲಿ ಶಾಸಕಿ ಪೂರ್ಣೀಮ ಒತ್ತಡ ತಂದು, ‘ಸಮಸ್ತ ಗೊಲ್ಲರ ಅಭಿವೃದ್ಧಿ ನಿಗಮ’ ಎಂದು ಹೆಸರು ಬದಲಾಯಿಸಿದ್ದರು. ನಂತರ ಕಾಡುಗೊಲ್ಲರ ಹೋರಾಟಕ್ಕೆ ಮಣಿದು, ಕಾಡುಗೊಲ್ಲರ ಅಭಿವೃದ್ಧಿ ನಿಗಮ ಎಂದು ಮರು ನಾಮಕರಣ ಮಾಡಲಾಯಿತು. ಇತ್ತೀಚೆಗೆ ಪತ್ರ ಬರೆದು ಗೊಲ್ಲ– ಕಾಡುಗೊಲ್ಲ ಅಭಿವೃದ್ಧಿ ನಿಗಮವೆಂದು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಇದು ಯಾದವರಿಗಿಂತ ಭಿನ್ನವಾಗಿರುವ ಕಾಡುಗೊಲ್ಲರನ್ನು ತುಳಿಯುವ ಪ್ರಯತ್ನವಾಗಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಕಾಡುಗೊಲ್ಲರ ಜನಸಂಖ್ಯೆ ಸುಮಾರು 10 ಲಕ್ಷ ಇದೆ. ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಆಚಾರ, ವಿಚಾರದಲ್ಲಿ, ಕೊಟ್ಟು–ತರುವುದು ಇಲ್ಲದ ಗೊಲ್ಲ– ಕಾಡುಗೊಲ್ಲರು ಒಂದೇ ಎಂದು ಪ್ರತಿಪಾದಿಸಲು ಹೊರಟಿರುವುದು ಸರಿಯಲ್ಲ. ಈ ಸಂಬಂಧ ನ. 27ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಗಮನ ಸೆಳೆಯಲು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದುತಿಳಿಸಿದರು.

ಕಾಡುಗೊಲ್ಲರ ಯುವಸೇನೆ ಅಧ್ಯಕ್ಷ ರಮೇಶ್, ಕಾಡುಗೊಲ್ಲ ಅಸ್ಮಿತೆ ಹೋರಾಟ ಸಮಿತಿ ಮುಖಂಡರಾದ ಗೋವಿಂದರಾಜು, ಸುನೀಲ್
ಕುಮಾರ್, ಶಶಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.