
ತುಮಕೂರು: ಮಹಿಳಾ ಸಬಲೀಕರಣದ ಹೊಸ ಹೆಜ್ಜೆಯಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಗೆ ₹30 ಸಾವಿರದಿಂದ ₹5 ಲಕ್ಷದ ವರೆಗೆ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ನಗರದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಫೈನಾನ್ಸ್ ಏಜೆನ್ಸಿಗಳು ಮಹಿಳೆಯರಿಗೆ ತುಂಬಾ ತೊಂದರೆ ಕೊಡುತ್ತಿವೆ. ಬಹಳಷ್ಟು ಜನ ಮೋಸ ಹೋಗಿದ್ದಾರೆ. ಇದನ್ನು ನಿಯಂತ್ರಿಸಲು ಗೃಹಲಕ್ಷ್ಮಿ ಸಂಘ ಆರಂಭಿಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಪ್ರಾರಂಭದಲ್ಲಿ ₹1 ಸಾವಿರ ಕೊಟ್ಟು ಸದಸ್ಯರಾಗಬೇಕು. ಪ್ರತಿ ತಿಂಗಳು ಉಳಿತಾಯ ಖಾತೆಗೆ ₹200 ಜಮಾ ಮಾಡಬೇಕು. ನಂತರದ ಆರು ತಿಂಗಳಿಗೆ ಸಾಲ ಪಡೆಯಬಹುದು. ಸಂಘದ ಮುಖಾಂತರ ಗಿನ್ನಿಸ್ ದಾಖಲೆ ಸೃಷ್ಟಿಸುವ ಪರಿಕಲ್ಪನೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 4 ಲಕ್ಷ ಸದಸ್ಯರನ್ನು ಸಂಘಕ್ಕೆ ನೋಂದಣಿ ಮಾಡಿಸಲಾಗುತ್ತಿದೆ. ಆರೋಗ್ಯ, ಮನೆ ನಿರ್ಮಾಣ, ಶಿಕ್ಷಣ, ವಾಹನ ಖರೀದಿ, ಹೈನುಗಾರಿಕೆ ಆರಂಭ, ಉದ್ದಿಮೆ ಸ್ಥಾಪನೆ ಸೇರಿ ಎಲ್ಲಾ ಕಾರ್ಯಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಮಹಿಳೆ, ಮಕ್ಕಳ ರಕ್ಷಣೆ ಉದ್ದೇಶದಿಂದ ಗೃಹ ಇಲಾಖೆ ಸಹಕಾರದಲ್ಲಿ ‘ಅಕ್ಕ’ ಪಡೆ ಅನುಷ್ಠಾನಕ್ಕೆ ತರಲಾಗುತ್ತಿದೆ. ರಾಜ್ಯದ 37 ಕಡೆಗಳಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದೆ. ಮೊದಲ ಹಂತದಲ್ಲಿ ಶಾಲಾ–ಕಾಲೇಜುಗಳಲ್ಲಿ ಅರಿವು ಮೂಡಿಸಲಾಗುತ್ತದೆ. ವಿವಿಧ ಕಡೆಗಳಲ್ಲಿ ಗಸ್ತು ನಡೆಸಲಾಗುತ್ತದೆ. ಯಾವುದೇ ದೌರ್ಜನ್ಯದ ಸಂಭವ ಎದುರಾದರೆ ಕರೆ ಮಾಡಬಹುದು. ಅಕ್ಕನ ರೀತಿಯಲ್ಲಿ ರಕ್ಷಣೆಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಶೇ 99ರಷ್ಟು ಅಂಗನವಾಡಿಗಳಲ್ಲಿ ಪೋಷಣ್ ಟ್ರ್ಯಾಕರ್ ಆ್ಯಪ್ ಬಳಸಲಾಗುತ್ತಿದೆ. ಅಂಗನವಾಡಿಯಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಹಾಜರಾತಿ, ಮಕ್ಕಳಿಗೆ ವಿತರಿಸುತ್ತಿರುವ ಆಹಾರ, ಕೇಂದ್ರದ ಮೂಲಭೂತ ಸೌಕರ್ಯಗಳ ಬಗ್ಗೆಯೂ ಆ್ಯಪ್‌ನಲ್ಲಿ ಉಲ್ಲೇಖಿಸಲಾಗುತ್ತಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಿದ್ದು, ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲಿ ಜಾರಿಗೆ ತಂದಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ಗುಣಮಟ್ಟದ, ವೈಜ್ಞಾನಿಕ ಶಿಕ್ಷಣ ನೀಡಬೇಕು. ಇದಕ್ಕೆ ಪೂರಕವಾಗಿ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಂದಾಗಿ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿವೆ. ಮಹಿಳಾ ಸಬಲೀಕರಣದಿಂದ ರಾಷ್ಟ್ರ ಬೆಳೆಯುತ್ತದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಸ್.ಸಿದ್ದರಾಮಣ್ಣ, ಮುಖಂಡರಾದ ಕುಮುದಾ, ಚಂದ್ರಕಲಾ, ವೆಂಕಟೇಶ್ ಮೂರ್ತಿ, ಹರೀಶ್ ಇತರರು ಹಾಜರಿದ್ದರು.
5 ಸಾವಿರ ಅಂಗನವಾಡಿಯಲ್ಲಿ ಎಲ್‌ಕೆಜಿ
ಪ್ರಾಯೋಗಿಕವಾಗಿ 5 ಸಾವಿರ ಹೊಸ ಅಂಗನವಾಡಿಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಲಾಗುತ್ತಿದೆ. ನ. 28ರಂದು ಇದಕ್ಕೆ ಚಾಲನೆ ಸಿಗಲಿದೆ. ರಾಜ್ಯದಲ್ಲಿ 17 ಸಾವಿರ ಕಾರ್ಯಕರ್ತೆಯರು ಪದವಿ 4 ಸಾವಿರ ಮಂದಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ ಅವರಿಗೆ ಎಲ್‌ಕೆಜಿ ಯುಕೆಜಿ ಜವಾಬ್ದಾರಿ ವಹಿಸಲಾಗುವುದು. ಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.