ADVERTISEMENT

ಕೆಲಸ ಕೊಡಿಸುವ ಆಮಿಷ: ಅಧಿಕಾರಿಗಳ ಹೆಸರಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 16:53 IST
Last Updated 10 ಫೆಬ್ರುವರಿ 2021, 16:53 IST

ತುಮಕೂರು: ನಾಗರಿಕರೇ ಹುಷಾರು! ಜಿಲ್ಲೆಯ ಪ್ರತಿಷ್ಠಿತ ಅಧಿಕಾರಿಗಳ ಬಳಿ ಸಹಾಯಕರಾಗಿ ನಿಮಗೆ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ವಂಚಿಸುವ ಜಾಲ ಜಿಲ್ಲೆಯಲ್ಲಿದೆ.

ಇದಕ್ಕೆ ತಾಜಾ ನಿದರ್ಶನವಾಗಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಲಾವಣ್ಯಗೌಡ ಎಂಬುವವರು ಒಬ್ಬ ಹೆಣ್ಣು ಮಗಳು ಹಾಗೂ ಮೂವರು ಯುವಕರನ್ನು ವಂಚಿಸಿದ್ದಾರೆ. ಈ ನಾಲ್ಕು ಮಂದಿಯಿಂದ ಗೂಗಲ್ ಪೇ, ಫೋನ್ ಪೇ ಮೂಲಕ ₹ 4.5 ಲಕ್ಷ ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.

ಲಾವಣ್ಯಗೌಡ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಾರೆ. ಯುವಕರನ್ನು ನಿತ್ಯವೂ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದಾರೆ. ನಿತ್ಯವೂ ಕಚೇರಿಗೆ ಬಂದು ಕೂರುತ್ತಿದ್ದ ಯುವಕರ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರು ಅನುಮಾನಪಟ್ಟಿದ್ದಾರೆ.

ADVERTISEMENT

ಯುವಕರನ್ನು ವಿಚಾರಿಸಿದಾಗ, ‘ನಮಗೆ ಲಾವಣ್ಯಗೌಡ ಕೆಲಸ ಕೊಡಿಸುವುದಾಗಿ ಹೇಳಿ ಇಲ್ಲಿಗೆ ಕಳುಹಿಸಿದ್ದಾರೆ. ಹಣ ಸಹ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಯುವಕರು ಲಾವಣ್ಯಗೌಡಗೆ ಕರೆಮಾಡಿ ಸಿಬ್ಬಂದಿ ಕೈಗೆ ನೀಡಿದ್ದಾರೆ. ‘ಯಾರು ನೀವು’ ಎಂದು ಸಿಬ್ಬಂದಿ ವಿಚಾರಿಸಿದಾಗ, ‘ನಾನು ಜಿಲ್ಲಾಧಿಕಾರಿ ಕಚೇರಿಯ ಡಿಆರ್ ವಿಭಾಗದಲ್ಲಿ ಕೆಲಸ ಮಾಡುವೆ’ ಎಂದು ಆಕೆ ಹೇಳಿದ್ದಾರೆ.
ಯಾವುದು ವಿಭಾಗ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ ಹೆಸರಿನವರು ಇಲ್ಲವಲ್ಲ ಎಂದು ಹೇಳಿದಾಗ, ಕರೆ ಕಡಿತಗೊಳಿಸಿದ್ದಾರೆ.

ಅಧಿಕಾರಿಗಳ ಹೆಸರು ಹೇಳಿ ವಂಚಿಸಿದ ಪ್ರಕರಣ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ವಂಚನೆಗೆ ಒಳಗಾಗಿರುವ ಯುವತಿಯ ಮನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಇದೆ. ಯುವತಿ ಮನೆಯಲ್ಲಿಯೇ ವ್ಯವಹಾರ ನಡೆದಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಂಚಕಿ ಬೆಂಗಳೂರು ಮಾಗಡಿ ರಸ್ತೆಯ ಜನಪ್ರಿಯ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಮನೆ ನಮಗೆ ಗೊತ್ತು. ಅವರ ಬಳಿ ಹಣ ವಾಪಸ್ ಕೊಡುವಂತೆ ಕೇಳುತ್ತೇವೆ. ಕೊಡದಿದ್ದರೆ ದೂರು ನೀಡುತ್ತೇವೆ ಎಂದು ಹಣ ಕಳೆದುಕೊಂಡವರು ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ
ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.