ADVERTISEMENT

ತಿಪಟೂರು: ಪರಿಹಾರ ನೀಡದೆ ಕಾಮಗಾರಿ; ಪ್ರತಿಭಟನೆ

ರಸ್ತೆ ಕಾಮಗಾರಿಗೆ ಭೂಸ್ವಾಧೀನ: ಪರಿಹಾರದಲ್ಲಿ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 6:40 IST
Last Updated 12 ಜೂನ್ 2020, 6:40 IST
ತಿಪಟೂರಿನಲ್ಲಿ ಪ್ರತಿಭಟನಾ ನಿರತ ರೈತರು
ತಿಪಟೂರಿನಲ್ಲಿ ಪ್ರತಿಭಟನಾ ನಿರತ ರೈತರು   

ತಿಪಟೂರು: ರೈತರಿಗೆ ಸೂಕ್ತ ಪರಿಹಾರ ನೀಡದೆ 206ರ ಬೈಪಾಸ್ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ ರೈತರು ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಹುಚ್ಚಗೊಂಡನಹಳ್ಳಿ ಬಳಿಯ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಸೂಕ್ತ ಪರಿಹಾರ ನೀಡಿಲ್ಲ ಎಂದು ರೈತರು ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಸಿದರು.
ಕಾಮಗಾರಿಯಲ್ಲಿ ನಿರತವಾಗಿದ್ದ ವಾಹನಕ್ಕೆ ಕಲ್ಲು ಎಸೆದು ಗಾಜನ್ನು ಪುಡಿ ಮಾಡಿದರು.

ಹುಚ್ಚಗೊಂಡನಹಳ್ಳಿ ರೈತ ನಂಜಾಮರಿ ಮಾತನಾಡಿ, ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ನೀಡದೆ ಏಕಾಏಕಿ ಬೆಳೆಗಳಿರುವ ಜಮೀನಿನಲ್ಲಿ ಕಾಮಗಾರಿ ಮಾಡಿ ಬೆಳೆ ನಾಶ ಮಾಡಿದ್ದಾರೆ. ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಾರೆ. ಪರಿಹಾರದ ಹಣ ನೀಡುವವರೆಗೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದರು.

ADVERTISEMENT

ರೈತ ಕಲ್ಲೇಶ್, ‘ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪರಿಹಾರದ ಹಣ ನೀಡುತ್ತಿದ್ದಾರೆ. ಕಾಮಗಾರಿಯಲ್ಲಿ ಮೋಸ ನಡೆದಿದ್ದು, ಯಾರೊಬ್ಬರೂ ಇದರ ಬಗ್ಗೆ ಮಾತನಾಡುವುದಿಲ್ಲ. ಲಾಭಿ ಮಾಡುವವರು ಹೆಚ್ಚಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಬಿ. ಆರತಿ, ಡಿವೈಎಸ್‍ಪಿ ಚಂದನ್ ಕುಮಾರ್, ರೈತರ ಸಮಸ್ಯೆಯನ್ನು ಆಲಿಸಿದರು. ಪರಿಹಾರದ ಹಣ ಮಂಜೂರು ಆಗದಿದ್ದವರು ಭೂಸ್ವಾಧೀನಾಧಿಕಾರಿ ಕಚೇರಿಗೆ ದಾಖಲೆ ಸಮೇತ ತೆರಳಿದರೆ
ಪರಿಹಾರ ಮಾಡಿಕೊಡುವುದಾಗಿ ತಿಳಿಸಿದರು.

ರೈತರ ಸಂಘಟನೆಯ ಪದಾಧಿಕಾರಿಗಳ ಬಂಧನ: ಪ್ರತಿಭಟನಕಾರರಿಗೆ ಬೆಂಬಲ ನೀಡಿದ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ದೇವರಾಜು, ತಿಮ್ಲಾಪುರ ಚಂದನ್, ಸಿದ್ದಲಿಂಗಮೂರ್ತಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ರೈತ ನಂಜುಂಡಪ್ಪ, ದಯಾನಂದ್, ಕೆ.ಬಿ.ಷಡಕ್ಷರಿ, ಕೆ.ಸಿ.ರಾಜಶೇಖರ್, ಬಿ.ಬಿ.ಸಿದ್ದಲಿಂಗಮೂರ್ತಿ, ಗೌರಿಶಂಕರ್, ನಂಜಾಮರಿ, ಶೋಭಾ, ಮಹಾಲಕ್ಷ್ಮಿ, ಮಹಾಲಕ್ಷ್ಮಮ್ಮ, ಶ್ರೀಕಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.