ADVERTISEMENT

ಕಾರ್ಮಿಕರ ಭವಿಷ್ಯ ಅಂಬಾನಿ ಕೈಗೆ ಕೊಡುತ್ತೀರಾ: ಗಿರೀಶ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2024, 5:18 IST
Last Updated 28 ಜನವರಿ 2024, 5:18 IST

ತುಮಕೂರು: ರಾಜ್ಯದ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ಪಡೆಯುವ ಯೋಜನೆ ರೂಪಿಸುತ್ತಿದ್ದು, ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ಕಾರ್ಮಿಕರ ಭವಿಷ್ಯವನ್ನು ಅಂಬಾನಿ, ಅದಾನಿ ಕೈಗೆ ಕೊಡುತ್ತೀರಾ? ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಇಲ್ಲಿ ಶನಿವಾರ ಪ್ರಶ್ನಿಸಿದರು‌.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ದುಂದುವೆಚ್ಚ ಮಾಡಲಾಗುತ್ತಿದೆ. ಬೇಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ. ಲ್ಯಾಪ್‌ಟಾಪ್‌, ಬಸ್‌ಪಾಸ್ ವಿತರಣೆ, ಕಾರ್ಮಿಕರ ಆರೋಗ್ಯ ತಪಾಸಣೆಯ ಹೆಸರಲ್ಲಿ ಸಾವಿರಾರು ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಿಲ್ಲೆಯ ವಿವಿಧೆಡೆ ರೈತರ ಭೂಮಿ ಸ್ವಾಧೀನ ಪಡಿಸಿಕೊಂಡು 30 ವರ್ಷ ಕಳೆದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆಗಳಲ್ಲಿ ರೈತರ ಮಕ್ಕಳಿಗೆ ಉದ್ಯೋಗ ಕೊಡುತ್ತಿಲ್ಲ. ಇದೀಗ ವಿಮಾನ ನಿಲ್ದಾಣ ನಿರ್ಮಿಸುವ ಮೂಲಕ ರಿಯಲ್‌ ಎಸ್ಟೇಟ್‌ ದಂಧೆ ಮಾಡಲು ಹೊರಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಜಮೀನು ಕಳೆದುಕೊಂಡ ರೈತರು ಗುಳೆ ಹೋಗುತ್ತಿದ್ದಾರೆ. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು. ಪ್ರಧಾನಿ ನರೇಂದ್ರ ಮೋದಿ ಎಚ್ಎಎಎಲ್‌ ಉದ್ಘಾಟನೆಯ ಸಮಯದಲ್ಲಿ 4 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ಒಬ್ಬರಿಗೂ ಕೆಲಸ ಸಿಕ್ಕಿಲ್ಲ. ಬೇರೆ ಬೇರೆ ವಿಷಯಗಳಿಂದ ಜನರ ಭಾವನೆ ಕೆರಳಿಸುವುದರ ಬದಲು ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕಂಬೇಗೌಡ, ಪದಾಧಿಕಾರಿಗಳಾದ ಅಶ್ವತ್ಥನಾರಾಯಣ, ಗೋವಿಂದರಾಜು, ರವಿಕುಮಾರ್‌, ರಾಮಕೃಷ್ಣ, ಶಿವಾನಂದ, ದೊಡ್ಡತಿಮ್ಮಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.