ADVERTISEMENT

‘ರಂಗಭೂಮಿಗೆ ಸಕ್ರಿಯಗೊಳಿಸುವ ಶಕ್ತಿ’

ವಿಶ್ವ ರಂಗಭೂಮಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 1:45 IST
Last Updated 28 ಮಾರ್ಚ್ 2022, 1:45 IST
ತುಮಕೂರಿನಲ್ಲಿ ಭಾನುವಾರ ನಾಟಕಮನೆಯಿಂದ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಹರಿಕಥಾ ವಿದ್ವಾನ್‌ ಲಕ್ಷಣದಾಸ್‌ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ರಂಗಕರ್ಮಿ ಚನ್ನಬಸಯ್ಯ ಗುಬ್ಬಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಕುಮಾರ್, ನಾಟಕಮನೆ ಮಹಾಲಿಂಗು, ರಂಗ ನಿರ್ದೇಶಕರಾದ ಮೆಳೇಹಳ್ಳಿ ದೇವರಾಜು, ಎನ್.ಆರ್.ಪ್ರಕಾಶ್ ಹಾಜರಿದ್ದರು

ತುಮಕೂರು: ರಂಗಭೂಮಿಗೆ ಎಲ್ಲರನ್ನು ಸಕ್ರಿಯಗೊಳಿಸುವ ಶಕ್ತಿ ಇದೆ. ಅನೇಕರು ರಂಗಭೂಮಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಹರಿಕಥಾ ವಿದ್ವಾನ್‌ ಲಕ್ಷಣದಾಸ್‌ ಹೇಳಿದರು.

ನಗರದಲ್ಲಿ ನಾಟಕಮನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪರಿಚಯಿಸಿದ್ದೇ ನಾಟಕಮನೆ. ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ, ರಂಗಭೂಮಿ ಎಂಬ ಸಮುದ್ರಕ್ಕೆ ನಾಟಕಮನೆಯಂತಹ ನೂರಾರು ನದಿಗಳು ಸೇರಿಕೊಳ್ಳುತ್ತಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ,‘ಪೌರಾಣಿಕ ನಾಟಕಗಳು ರಾಮಾಯಣ, ಮಹಾಭಾರತದ ಕಥೆಗಳನ್ನು ಆಧರಿಸಿದ್ದರೂ, ಜನತೆ ಅದನ್ನು ತಮ್ಮದೇ ಜೀವನ ಎಂಬಂತೆ ಭಾವಿಸುತ್ತಿದ್ದರು. ಆದರೆ, ಇಂದಿನ ಚಲನಚಿತ್ರ, ಧಾರವಾಹಿಗಳು, ಜನರನ್ನು ರಂಜಿಸಲಷ್ಟೇ ಸಿಮೀತವಾಗಿವೆ’ ಎಂದು ಹೇಳಿದರು.

ADVERTISEMENT

ರಂಗಕರ್ಮಿ ಚನ್ನಬಸಯ್ಯ ಗುಬ್ಬಿ, ‘ರಂಗಭೂಮಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಂಗಭೂಮಿಗಾಗಿ ಇಡೀ ಜೀವನವನ್ನು ಸವೆಸಿದ್ದೇನೆ. ನಾಟಕಗಳಲ್ಲಿ ನಟಿಸಬೇಕು ಎಂಬ ಆಸೆ ಈಗಲೂ ಕುಂದಿಲ್ಲ. ಜಗತ್ತು ಇರುವವರೆಗೂ ರಂಗಭೂಮಿ ಉಳಿಯಲಿ’ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ,‘ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗಿದ್ದು, ಜನ ನಾಟಕಗಳತ್ತ ಬರುವುದು ಕೂಡ ವಿರಳವಾಗಿದೆ. ಇದರ ಜೊತೆಗೆ ಕೊರೊನಾದಿಂದಾಗಿ ಎಲ್ಲ ಕಲಾ ಪ್ರಕಾರಗಳು ಪ್ರೇಕ್ಷಕರ ಕೊರತೆ ಅನುಭವಿಸುತ್ತಿವೆ’ ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ‘ರಂಗಭೂಮಿಯ ಸದ್ಯದ ಸವಾಲುಗಳು’ ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಕಲಾವಿದರಾದ ಸಣ್ಣ ಹೊನ್ನಯ್ಯ ಕಂಟಲಗೆರೆ, ಉಗಮ ಶ್ರೀನಿವಾಸ್, ರಮೇಶ್ ಮಣ್ಣೆ, ಎ.ಎಂ.ನಾಗರಾಜರಾವ್, ಕುಣಿಗಲ್ ದಿನೇಶ್, ಚೇತನಾ, ಕೆಂಕೆರೆ ಮಲ್ಲಿಕಾರ್ಜುನ್, ಕಾಂತರಾಜು ಕೌತುಮಾರನಹಳ್ಳಿ, ಸದಾಶಿವ ಮಂಗಳೂರು ಹಲವು ವಿಷಯಗಳ ಕುರಿತು ಮಾತನಾಡಿದರು.

ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ಕುಮಾರ್, ನಾಟಕಮನೆ ಮಹಾಲಿಂಗು, ರಂಗ ನಿರ್ದೇಶಕರಾದ ಮೆಳೇಹಳ್ಳಿ ದೇವರಾಜು, ಎನ್.ಆರ್.ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.