
ತುಮಕೂರು: ‘ಸಾಹಿತಿಗಳು, ಸಾಂಸ್ಕೃತಿಕ ಕಾರ್ಯಕರ್ತರು ಸರ್ಕಾರದ ಆಶ್ರಯ ಪಡೆಯುವುದು ನಿಲ್ಲಿಸಬೇಕು. ಸಾಹಿತಿ ದುಡಿದು ಸಂಪಾದಿಸಬೇಕು, ಮಾಸಾಶನದಿಂದಲ್ಲ’ ಎಂದು ಚಿಂತಕ ಬಂಜಗೆರೆ ಜಯಪ್ರಕಾಶ್ ಹೇಳಿದರು.
ನಗರದಲ್ಲಿ ಭಾನುವಾರ ಬಹುಮುಖಿ ಬಳಗದಿಂದ ಹಮ್ಮಿಕೊಂಡಿದ್ದ ‘ಅಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಸಾಶನ ಪಡೆದು ದಿನ ಪೂರ್ತಿ ಬರೆಯುತ್ತಾ ಕುಳಿತರೆ ಕ್ರಿಯಾಶೀಲ ಸಾಹಿತಿ ಎನ್ನಲು ಆಗುವುದಿಲ್ಲ. ಅವರಿಗೆ ಜೀವನ ಅನುಭವ ಇರುವುದಿಲ್ಲ. ಬದುಕಿನ ಜತೆಗೆ ಕ್ರಿಯಾಶೀಲವಾಗಿ ತೊಡಗಿಸಿಕೊಂಡಾಗ ಮಾತ್ರ ಉತ್ತಮ ಸಾಹಿತ್ಯ ಸೃಜನೆ ಸಾಧ್ಯ. ಪ್ರಸ್ತುತ ಯುವ ಬರಹಗಾರರು ತೆರೆದ ಕಣ್ಣಿನಿಂದ ನೋಡಿದ, ಬದುಕಿನ ಅನುಭವದ ಬಗ್ಗೆ ಬರೆಯುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಭರವಸೆಯ ಬರಹಗಾರರು ಕನ್ನಡಕ್ಕೆ ಬಂದಿದ್ದಾರೆ. ಇದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಸಾಹಿತ್ಯ, ಸಾಂಸ್ಕೃತಿಕ ವಲಯವನ್ನು ಸಮಾಜದ ಸಾಕ್ಷಿ ಪ್ರಜ್ಞೆ ಎಂದು ಕರೆಯುತ್ತಾರೆ. ಜಗತ್ತಿನಲ್ಲಿ ಏನೇ ವಿದ್ಯಮಾನ ನಡೆದರೂ ಅದರ ಬಗ್ಗೆ ಬರಹಗಾರರು ಧ್ವನಿ ಎತ್ತುತ್ತಾರೆ. ಸಾಹಿತ್ಯ, ಸಂಸ್ಕೃತಿಯನ್ನು ಕಳೆದುಕೊಂಡರೆ ದೇಶ, ಭಾಷೆಯ ಭವಿಷ್ಯ ಚಿಂತಾಜನಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜನಪ್ರತಿನಿಧಿ, ಆಡಳಿತಾಧಿಕಾರಿ ತಪ್ಪು ಮಾಡಿದರೆ ಸಂದರ್ಭ, ರಾಜಕಾರಣದ ಒತ್ತಡ ಎಂದು ಹೇಳಬಹುದು. ಆದರೆ ಒಬ್ಬ ಸಾಹಿತಿಯ ಆಲೋಚನೆ, ಕ್ರಿಯೆ, ತೀರ್ಪುಗಳಲ್ಲಿ ತಪ್ಪಾದರೆ ನಾಡಿನ ಮನಸಾಕ್ಷಿ ಸತ್ತು ಹೋಗುತ್ತದೆ. ಆತಂಕ ಶುರುವಾಗುತ್ತದೆ. ಅತ್ಯಂತ ಕರಾಳ ಕಾಲಘಟ್ಟದಲ್ಲೂ, ಅಂಧಕಾರದ ಯುಗದಲ್ಲೂ, ಸರ್ವಾಧಿಕಾರಿ ಆಡಳಿತದಲ್ಲೂ, ಯುದ್ಧದ ಕಾರ್ಮೋಡ ಕವಿದ ಸಮಯದಲ್ಲೂ ಬರಹಗಾರರು, ಸಾಂಸ್ಕೃತಿಕ ಕಾರ್ಯಕರ್ತರು ಮನುಷ್ಯತ್ವದ ಆಶಯ ಮತ್ತು ಬೆಳಕಿನ ಭರವಸೆ ಹುಟ್ಟಿಸಿದ್ದಾರೆ ಎಂದು ತಿಳಿಸಿದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಇತ್ತೀಚೆಗೆ ಡಾಕ್ಟರೇಟ್ ಪುರಸ್ಕಾರಗಳು ಸಹ ಹಣಕ್ಕೆ ಬಿಕರಿಯಾಗುತ್ತಿವೆ. ಬಹಳಷ್ಟು ಸಮಾರಂಭಗಳಲ್ಲಿ ಕೃತಿ, ಕೃತಿಕಾರರಿಗೆ ಹೆಚ್ಚು ಮನ್ನಣೆ ಸಿಗುವುದಿಲ್ಲ. ಕೃತಿಯನ್ನು ವಿಮರ್ಶಿಸುವ ಜತೆಗೆ ಕೃತಿಕಾರರಿಂದಲೂ ಮಾತನಾಡಿಸುವ ಪ್ರಯತ್ನ ಹೊಸ ಬೆಳವಣಿಗೆ. ಇದು ಮುಂದುವರಿಯಲಿ’ ಎಂದು ಆಶಿಸಿದರು.
ಲೇಖಕರಾದ ರವಿಕುಮಾರ್ ನೀಹ, ದೀಪದ ಮಲ್ಲಿ, ಕಪಿಲ ಪಿ.ಹುಮನಾಬಾದೆ ಅವರಿಗೆ ‘ಅಪ್ಪ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಲೇಖಕ ಸತೀಶ್ ಜವರೇಗೌಡ, ಬಹುಮುಖಿ ಬಳಗದ ಹಡವನಹಳ್ಳಿ ವೀರಣ್ಣಗೌಡ, ಮಂಜುನಾಥ್ ದಂಡಿನಶಿವರ, ಎಚ್.ವಿ.ನಾಗರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.