ADVERTISEMENT

ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆ ಮೊದಲ ಬಾರಿಗೆ ರದ್ದು

548 ವರ್ಷದ ಇತಿಹಾಸದಲ್ಲಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 10:30 IST
Last Updated 30 ಮಾರ್ಚ್ 2020, 10:30 IST
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರ ಭಕ್ತರಿಲ್ಲದೆ ಭಣಗುಡುತ್ತಿದೆ
ಕುಣಿಗಲ್ ತಾಲ್ಲೂಕು ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಕ್ಷೇತ್ರ ಭಕ್ತರಿಲ್ಲದೆ ಭಣಗುಡುತ್ತಿದೆ   

ಕುಣಿಗಲ್: ಶರಣಕುಲ ಚಕ್ರವರ್ತಿ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ನಿರ್ವಿಲಕ್ಪ ಸಮಾಧಿಯಾಗಿ 548 ವರ್ಷ ಕಳೆದಿದ್ದು, 549ನೇ ವರ್ಷದ ಜಾತ್ರೆ ರದ್ದಾಗಿರುವುದು ಭಕ್ತರಿಗೆ ನಿರಾಸೆ ಉಂಟುಮಾಡಿದೆ. ದೇಶದ ಜನರ ಆರೋಗ್ಯ ದೃಷ್ಟಿಯಿಂದ ಸಂಭ್ರಮ ಈ ವರ್ಷ ಒಂದು ನೆನಪಾಗಿ ಮಾತ್ರ ಉಳಿಯುತ್ತಿದೆ.

ಇದೇ 31ರಂದು ಜಾತ್ರೆ ನಡೆಯಬೇಕಿತ್ತು. 548 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಜಾತ್ರೆ ರದ್ದಾಗಿದೆ. ಚೈತ್ರಮಾಸದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಎಡೆಯೂರಿಗೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತಿತ್ತು.

ಇಲ್ಲಿ ನಡೆಯುತ್ತಿದ್ದ ದನಗಳ ಜಾತ್ರೆಯಲ್ಲಿ ರಾಜ್ಯದ ವಿವಿಧ ಭಾಗದಿಂದ ರೈತರು 7 ಸಾವಿರದಿಂದ 10 ಸಾವಿರ ಜೊತೆ ದನಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಉತ್ತಮ ರಾಸುಗಳಿಗೆ ಸರ್ಕಾರದಿಂದ ಬಹುಮಾನ ಸಹ ನೀಡಲಾಗುತ್ತಿತ್ತು.

ADVERTISEMENT

ಜಾತ್ರೆ ಕಾರ್ಯಕ್ರಮಗಳು ಪ್ರಾರಂಭವಾಗುತ್ತಿದ್ದಂತೆ ದಾಸೋಹ ಮಹಾಮನೆಯಲ್ಲಿ ನಿತ್ಯ ಕನಿಷ್ಠ 5 ಸಾವಿರದಿಂದ 10 ಸಾವಿರ ಭಕ್ತರಿಗೆ ದಾಸೋಹ ನಡೆಯುತ್ತಿತ್ತು. ರಥೋತ್ಸವದಂದು 50 ಸಾವಿರದಿಂದ 60 ಸಾವಿರ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿತ್ತು.

‘ದೇಶದ ಜನರ ಆರೋಗ್ಯ ಹಿತದೃಷ್ಠಿಯಿಂದ ಪ್ರಧಾನ ಮಂತ್ರಿಯ ನಿರ್ಣಯವನ್ನು ಸ್ವಾಗತಿಸಲೇಬೇಕಾಗಿದೆ. ಜಾತ್ರೆ ರದ್ದಾಗಿದ್ದರೂ ಅರ್ಚಕ ಬಳಗದವರಿಂದ ಸಂಪ್ರದಾಯಿಕ ಪೂಜೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪ್ರಧಾನ ಆಗಮಿಕರಾದ ಶಿವಮೂರ್ತಯ್ಯ ತಿಳಿಸಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.