ADVERTISEMENT

ತುಮಕೂರು: ಗೆದ್ದಲು ಹಿಡಿದ ‘ಸಲೀಂ ಅಲಿ’ ಮಾಹಿತಿ ಕೇಂದ್ರ

ಇಂದು ಪಕ್ಷಿ ಪ್ರೇಮಿ ಸಲೀಂ ಅಲಿ ಜನ್ಮದಿನ; ಜಿಲ್ಲೆಗೆ ಭೇಟಿ ನೀಡಿದ್ದ ಸಲೀಂ ಅಲಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 6:29 IST
Last Updated 12 ನವೆಂಬರ್ 2025, 6:29 IST
ತುಮಕೂರಿನ ನಾಮದಚಿಲುಮೆಯಲ್ಲಿರುವ ಸಲೀಂ ಅಲಿ ಮಾಹಿತಿ ಕೇಂದ್ರ
ತುಮಕೂರಿನ ನಾಮದಚಿಲುಮೆಯಲ್ಲಿರುವ ಸಲೀಂ ಅಲಿ ಮಾಹಿತಿ ಕೇಂದ್ರ   

ತುಮಕೂರು: ಜಿಲ್ಲೆಯ ಅಪರೂಪದ ಪಕ್ಷಿ ಪ್ರಬೇಧ ‘ಹಳದಿ ಕೊರಳಿನ ಬುಲ್ ಬುಲ್’ (ಎಲ್ಲೋ ಥ್ರೋಟೆಡ್‌ ಬುಲ್‌ ಬುಲ್‌) ಕುರಿತು ನಾಡಿಗೆ ಪರಿಚಯಿಸಿದ್ದ ಪಕ್ಷಿ ತಜ್ಞ ಸಲೀಂ ಅಲಿ ಅವರ ನೆನಪಿಗಾಗಿ ತಾಲ್ಲೂಕಿನ ನಾಮದಚಿಲುಮೆಯಲ್ಲಿ ಆರಂಭಿಸಿದ್ದ ‘ಮಾಹಿತಿ ಕೇಂದ್ರ’ ಗೆದ್ದಲು ಹಿಡಿದಿದೆ.

‘ಭಾರತದ ಪಕ್ಷಿ ಮನುಷ್ಯ’ ಎಂದು ಕರೆಸಿಕೊಳ್ಳುವ ಸಲೀಂ ಅಲಿ ಜನ್ಮ ದಿನವನ್ನು ನ. 12ರಂದು ಆಚರಿಸಲಾಗುತ್ತದೆ. ಅವರು 1939ರ ಕೊನೆಯಲ್ಲಿ ತಾಲ್ಲೂಕಿನ ದೇವರಾಯನದುರ್ಗಕ್ಕೆ ಭೇಟಿ ನೀಡಿ, ಇಲ್ಲಿ ಪಕ್ಷಿ ಸಂಕುಲದ ಬಗ್ಗೆ ಅಧ್ಯಯನ ನಡೆಸಿ ಪಕ್ಷಿ ಪ್ರಪಂಚವನ್ನು ತೆರೆದಿಟ್ಟಿದ್ದರು. ಸಲೀಂ ತಂಗಿದ್ದ ನಾಮದ ಚಿಲುಮೆಯ ಅತಿಥಿ ಗೃಹ ಈಗ ಪಾಳು ಬಿದ್ದಿದೆ.

ಮೈಸೂರು ಪ್ರಾಂತ್ಯಕ್ಕೆ ಪಕ್ಷಿಗಳ ಅಧ್ಯಯನಕ್ಕಾಗಿ ಬಂದವರು ಇಲ್ಲಿಯೇ ತಂಗಿದ್ದರು. ದೇವರಾಯನದುರ್ಗದ ಪರಿಸರ, ಪಕ್ಷಿಗಳ ಕಲರವಕ್ಕೆ ಮನಸೋತು ನಾಮದಚಿಲುಮೆಯಲ್ಲಿ ಉಳಿದುಕೊಂಡಿದ್ದರು. ಸುಮಾರು 65 ಪ್ರಭೇದದ ಪಕ್ಷಿಗಳನ್ನು ಗುರುತಿಸಿದ್ದರು. ಇದರಲ್ಲಿ ‘ಹಳದಿ ಕೊರಳಿನ ಬುಲ್ ಬುಲ್’ ಪ್ರಮುಖವಾದದ್ದು. ಕಲ್ಲು–ಬಂಡೆ ಹೆಚ್ಚಿರುವ ಕಡೆಯಲ್ಲಿ ಮಾತ್ರ ಈ ಪಕ್ಷಿ ಕಾಣಸಿಗುತ್ತದೆ. ಇಂತಹ ಪ್ರಬೇಧವನ್ನು ಮೊದಲ ಬಾರಿಗೆ ಗುರುತಿಸಿದವರು ಸಲೀಂ ಅಲಿ.

ADVERTISEMENT

ಅತಿಥಿ ಗೃಹದ ಹೆಂಚುಗಳು ಕಿತ್ತು ಬಂದಿದ್ದವು. ಹಾಳು ಕೊಂಪೆಯಾಗಿ ಬದಲಾಗಿತ್ತು. ಈಚೆಗೆ ಅರಣ್ಯ ಇಲಾಖೆಯಿಂದ ಹೊಸದಾಗಿ ಶೀಟ್‌ ಅಳವಡಿಸಿ ಬಣ್ಣದಲ್ಲಿ ಅಲಂಕರಿಸಲಾಗಿತ್ತು. ವಿವಿಧ ಪಕ್ಷಿಗಳ ಚಿತ್ರಗಳ ಜತೆಗೆ ಸಲೀಂ ಅವರ ಪರಿಚಯ ಮಾಡಿಸುವ ಪ್ರಯತ್ನವನ್ನು ಇಲಾಖೆ ಮಾಡಿತ್ತು. ಅವರ ಹುಟ್ಟು, ಬೆಳವಣಿಗೆ, ಜಿಲ್ಲೆಯ ಭೇಟಿಯ ಬಗ್ಗೆ ತಿಳಿಸುವ ಭಿತ್ತಿಪತ್ರ ಅಳವಡಿಸಲಾಗಿತ್ತು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಅತಿಥಿ ಗೃಹ ನಿರ್ವಹಣೆ ಇಲ್ಲದೆ ಸೊರಗಿದೆ.

ಅತಿಥಿ ಗೃಹದ ಬಾಗಿಲು, ಕಿಟಕಿಗಳು ಮುರಿದಿವೆ. ಇಲ್ಲಿಗೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಿಗೆ ಅಗತ್ಯ ಮಾಹಿತಿ ನೀಡುವವರು ಇಲ್ಲವಾಗಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಶೀಟ್‌ ಅಳವಡಿಸಿದ್ದರು. ನಾಮಕಾವಸ್ಥೆಗೆ ಸಲೀಂ ಅಲಿ ಅವರ ಮಾಹಿತಿ ಕೇಂದ್ರ ಎಂದು ಹೆಸರಿಟ್ಟರು. ಇಲ್ಲಿ ಹೆಚ್ಚಿನ ಮಾಹಿತಿಯೇ ಇಲ್ಲ ಎಂಬುದು ಪಕ್ಷಿ ಪ್ರೇಮಿಗಳ ಆರೋಪ.

ಮಾಹಿತಿ ಕೇಂದ್ರದ ಬಾಗಿಲು ಮುರಿದಿರುವುದು

ವಸ್ತು ಸಂಗ್ರಹಾಲಯ:

‘ಪಕ್ಷಿಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ತುಂಬಾ ಕಡಿಮೆ. ಅದು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಸಲೀಂ ಅಲಿ ಜಿಲ್ಲೆಯ ಪಕ್ಷಿಗಳ ಕುರಿತು ಸಂಶೋಧನೆ ನಡೆಸಿದ್ದರು. ಅವರು ಗುರುತಿಸಿದ ಅನೇಕ ಪಕ್ಷಿಗಳು ಈಗ ಅಳಿವಿನ ಅಂಚಿನಲ್ಲಿವೆ. ಇದರ ಬಗ್ಗೆ ಪರಿಚಯಿಸುವ ನಿಟ್ಟಿನಲ್ಲಿ ನಾಮದಚಿಲುಮೆಯಲ್ಲಿ ವಸ್ತು ಸಂಗ್ರಹಾಲಯ ಆರಂಭಿಸಬೇಕು’ ಎಂದು ಪರಿಸರವಾದಿ ಬಿ.ವಿ.ಗುಂಡಪ್ಪ ಒತ್ತಾಯಿಸಿದರು.

ಶಿಥಿಲಾವಸ್ಥೆಯಲ್ಲಿರುವ ಮಾಹಿತಿ ಕೇಂದ್ರ ಅಭಿವೃದ್ಧಿ ಮಾಡಬೇಕು. ಪ್ರವಾಸಿಗರಲ್ಲಿ ಸಲೀಂ ಅಲಿ, ಜಿಲ್ಲೆಯ ಪಕ್ಷಿ ಪ್ರಭೇದಗಳ ಕುರಿತು ಮಾಹಿತಿ ಹಂಚಿಕೊಳ್ಳುವ ಕೆಲಸ ಅರಣ್ಯ ಇಲಾಖೆ ಮಾಡಬೇಕು ಎಂದು ಪ್ರತಿಕ್ರಿಯಿಸಿದರು.

ಹಳದಿ ಕೊರಳಿನ ಬುಲ್ ಬುಲ್‌.... ಚಿತ್ರ: ಜಿ.ವಿ.ಆನಂದಮೂರ್ತಿ
ಪಕ್ಷಿ ಲೋಕಕ್ಕೆ ಕೊಡುಗೆ
‘ಹಳದಿ ಕೊರಳಿನ ಬುಲ್ ಬುಲ್’ ರಾಜ್ಯದ ವಿಶೇಷ ಪಕ್ಷಿ. ಸಲೀಂ ಅಲಿ ದೇವರಾಯನದುರ್ಗದಲ್ಲಿ ಇದನ್ನು ಮೊದಲ ಬಾರಿಗೆ ಗುರುತಿಸುವ ಮೂಲಕ ಪಕ್ಷಿ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾಮದಚಿಲುಮೆಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಭಾಗದ ಅರಣ್ಯ ವಲಯದಲ್ಲಿ ಹಲವು ಬಗೆಯ ಪಕ್ಷಿಗಳನ್ನು ಗುರುತಿಸಿದ್ದರು. ಜಿ.ವಿ.ಆನಂದಮೂರ್ತಿ ಕಥೆಗಾರ ವನ್ಯಜೀವಿ ಛಾಯಾಗ್ರಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.