
ತಿಪಟೂರು: ಕಾರ್ಪೊರೇಟ್ ಸಂಸ್ಥೆಗಳಿಗೆ ಅಂಬಾನಿ, ಅದಾನಿಗಳಿಗೆ ಕೇಂದ್ರ ಸರ್ಕಾರ ಸಾವಿರಾರು ಎಕರೆ ಜಮೀನು ನೀಡಿದೆ. ಆದರೆ ಸಣ್ಣಪುಟ್ಟ ತಪ್ಪುಗಳನ್ನು ಎತ್ತಿ ಹಿಡಿದು ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗೆ ಅಡ್ಡಿ ಪಡಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೆ.ಬಿ.ಕ್ರಾಸ್ ಬಳಿ ಹಾದು ಹೋಗುವ ಎತ್ತಿನಹೊಳೆ ಯೋಜನೆ ನಾಲಾ ಕಾಮಗಾರಿ ಸ್ಥಳದಲ್ಲಿ ನಡೆದ ಆಂದೋಲನ ಸಭೆಯಲ್ಲಿ ಮಾತನಾಡಿದರು.
2014ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಲ್ಲಿಂದ ಈವರೆಗೆ ₹23 ಸಾವಿರ ಕೋಟಿ ಖರ್ಚಾಗಿದೆ. ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ. ಸಂಪೂರ್ಣ ಕಾಮಗಾರಿಯ ಜವಾಬ್ದಾರಿ ರಾಜ್ಯ ಸರ್ಕಾರ ಹೊತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಚಿಕ್ಕಮಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಂಟು ಜಿಲ್ಲೆಗಳ ರೈತರ ಬದುಕು ಹಸನಾಗುವುದರ ಜೊತೆಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು.
ಕಾಮಗಾರಿ ಶೇ 90ರಷ್ಟು ಮುಗಿಯುವ ಹಂತ ತಲುಪುವ ಮಟ್ಟಕ್ಕೆ ಬಂದಾಗ ಅರಣ್ಯ ಮತ್ತು ಪರಿಸರ ಇಲಾಖೆ ತಕರಾರು ತೆಗೆದು ನಾಲೆ ಪಕ್ಕ ಹೆಚ್ಚುವರಿಯಾಗಿ ಜಾಗ ತೆಗೆದುಕೊಂಡಿದ್ದೀರ ಎಂದು 11 ಪ್ರಶ್ನೆಗಳನ್ನು ಕೇಳಿದೆ ಎಂದರು.
ನವೆಂಬರ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರನ್ನು ಬೇಟಿ ಮಾಡಿ ಯೋಜನೆಯಿಂದ 76 ಲಕ್ಷ ಜನರಿಗೆ ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದಾಗ ತೊಡಕು ನಿವಾರಣೆಯ ಭರವಸೆ ನೀಡಿದ್ದರು. ಆದರೆ ಯಾವ ಬೆಳವಣಿಗೆಯೂ ಕಾಣುತ್ತಿಲ್ಲ. ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳನ್ನು ಆಹ್ವಾನಿಸಿ ಲಕ್ಷಾಂತರ ಜನರನ್ನು ಸೇರಿಸಿ ಜನಾಂದೋಲನ ನಡೆಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಎತ್ತಿನಹೊಳೆ ನೀರು ಹರಿದರೆ ಕೆರೆಗಳು ತುಂಬಿ ಅಂತರ್ಜಲ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೊಡ್ಡಮನಸ್ಸು ಮಾಡಿ ಸಣ್ಣಪುಟ್ಟ ಲೋಪಗಳನ್ನ ಎತ್ತಿ ಹಿಡಿಯಬಾರದು. ನೀರಿಗಾಗಿ ಹೋರಾಟಕ್ಕೆ ಸಿದ್ಧ ಎಂದರು.
ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿದರು. ತಾಲ್ಲೂಕು ಅಧ್ಯಕ್ಷರಾದ ಪಿ.ಟಿ.ಚಿಕ್ಕಣ್ಣ, ಕಾಂತರಾಜು, ವೆಂಕಟೇಶ್, ಶಂಕರಪ್ಪ, ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂ, ಸಾವಯುವ ಕೃಷಿಕ ತರಬೇನಹಳ್ಳಿ ಷಡಾಕ್ಷರಿ, ದೇವರಾಜು, ನಾಗರಾಜು, ಲಕ್ಷ್ಮೀದೇವಮ್ಮ, ಪ್ರಸನ್ನಕುಮಾರ್, ಭಾಗ್ಯಮ್ಮ, ರಾಧಮ್ಮ, ಸುಕನ್ಯಾ, ಆದಿಲ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.