ADVERTISEMENT

ಎತ್ತಿನಹೊಳೆ: ಆಗಸ್ಟ್‌ಗೆ ಭೂಸ್ವಾಧೀನ ಪೂರ್ಣ

ತೆವಳುತ್ತಿರುವ ದಾವಣಗೆರೆ, ರಾಯದುರ್ಗ ರೈಲ್ವೆ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 2:37 IST
Last Updated 24 ಜುಲೈ 2025, 2:37 IST
ಜಿ.ಪರಮೇಶ್ವರ
ಜಿ.ಪರಮೇಶ್ವರ   

ತುಮಕೂರು: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎತ್ತಿನಹೊಳೆ ನೀರಾವರಿ ಯೋಜನೆಗೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆಗಸ್ಟ್ ಅಂತ್ಯದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ಭೂ ಮಾಲೀಕರಿಗೆ ಪರಿಹಾರ ನೀಡಿದ್ದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಭೂಸ್ವಾಧೀನ ಪಡಿಸಿಕೊಂಡ ಪ್ರದೇಶದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿ ಮುಂದುವರಿಸಬೇಕು ಎಂದು ನಿರ್ದೇಶಿಸಿದರು.

ADVERTISEMENT

ತುಮಕೂರು- ರಾಯದುರ್ಗ ರೈಲ್ವೆ ಯೋಜನೆಗಾಗಿ ಬ್ರಹ್ಮಸಂದ್ರ, ಮುದಿಗೆರೆಕಾವಲ್, ಕಳ್ಳಂಬೆಳ್ಳ, ಸೀಬಿ ಅಗ್ರಹಾರ ಬಳಿ ಭೂಸ್ವಾಧೀನ ಪಡಿಸಿಕೊಂಡ ಮಾಲೀಕರಿಗೆ ತಕ್ಷಣ ಪರಿಹಾರ ಪಾವತಿಗೆ ಸೂಚಿಸಿದರು.

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್, ರಾಷ್ಟ್ರೀಯ ಹೆದ್ದಾರಿ, ನಂದಿಹಳ್ಳಿ– ಮಲ್ಲಸಂದ್ರ ಬೈಪಾಸ್ ರಸ್ತೆ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್, ‘ರಾಮೇನಹಳ್ಳಿ, ಶೆಟ್ಟಿಹಳ್ಳಿ ಗ್ರಾಮದಲ್ಲಿ 1.34 ಕಿ.ಮೀ ಪ್ರದೇಶದಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲು ಸಮಸ್ಯೆಯಾಗಿದೆ’ ಎಂದರು.

ತುಮಕೂರು- ರಾಯದುರ್ಗ ಯೋಜನೆಯ ಎಂಜಿನಿಯರ್, ‘ಊರುಕೆರೆ- ಕೊರಟಗೆರೆ- ಮಧುಗಿರಿ- ಮಡಕಶಿರಾ ಮಾರ್ಗದ ರೈಲ್ವೆ ನಿರ್ಮಾಣ ಕಾಮಗಾರಿಯನ್ನು 2028ರ ಫೆಬ್ರುವರಿ ಒಳಗೆ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ತುಮಕೂರು- ದಾವಣಗೆರೆ ರೈಲ್ವೆ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಸುಪ್ರಿಯ, ಕೆಲವು ಕಡೆ ಭೂ ಪರಿಹಾರ ನೀಡಿದ್ದರೂ ಕಾಮಗಾರಿಗೆ ಬಿಡುತ್ತಿಲ್ಲ ಎಂಬ ವಿಚಾರವನ್ನು ಸಚಿವರ ಗಮನಕ್ಕೆ ತಂದರು. ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ದೇಶಿಸಿದರು.

ಹೇಮಾವತಿ ಕುಡಿಯುವ ನೀರಿನ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುಳ, ‘ಮುಂದಿನ 6 ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಮೊದಲ ಹಂತದಲ್ಲಿ ₹168 ಕೋಟಿ, 2ನೇ ಹಂತದಲ್ಲಿ ₹154 ಕೋಟಿ ಪರಿಹಾರ ಪಾವತಿಸಲಾಗಿದೆ. 2026ರ ಮಾರ್ಚ್ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಅಧಿಕಾರಿಗಳು ಉಪಸ್ಥಿತರಿದ್ದರು.

ಇನ್ನೂ ₹163 ಕೋಟಿ ಬಾಕಿ

ಎತ್ತಿನಹೊಳೆ ಯೋಜನೆಯು ಜಿಲ್ಲೆಯ 144 ಗ್ರಾಮಗಳ ವ್ಯಾಪ್ತಿಯಲ್ಲಿ ಹಾದು ಹೋಗಲಿದೆ. ಈವರೆಗೆ 3529 ಭೂ ಮಾಲೀಕರಿಗೆ ₹746 ಕೋಟಿ ಪರಿಹಾರ ನೀಡಲಾಗಿದ್ದು ₹925 ಕೋಟಿ ಪರಿಹಾರ ಪಾವತಿಗೆ ಅವಾರ್ಡ್ ಅನುಮೋದನೆಯಾಗಿದೆ. ಉಳಿದಂತೆ 819 ಭೂ ಮಾಲೀಕರಿಗೆ ₹163 ಕೋಟಿ ಪರಿಹಾರ ಪಾವತಿಸಬೇಕಾಗಿದೆ ಎಂದು ಎತ್ತಿನಹೊಳೆ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಮುರುಳಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.