ADVERTISEMENT

ಯುವ ಬರಹಗಾರರಿಗೆ ಸತ್ಯ ಪ್ರತಿಪಾದಿಸುವ ಎದೆಗಾರಿಕೆ ಇರಲಿ

ರಾಜ್ಯಮಟ್ಟದ ಯುವ ಬರಹಾರರ ಕಾರ್ಯಾಗಾರದಲ್ಲಿ ಸಾಮಾಜಿಕ ಹೋರಾಟಗಾರ ದೊರೆರಾಜ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 13:25 IST
Last Updated 5 ಜನವರಿ 2020, 13:25 IST
ತುಮಕೂರು ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಯಿಂದ ಭಾಗವಹಿಸಿದ್ದ ಬಂಡಾಯ ಲೇಖಕರು, ಯುವಬರಹಗಾರರು.
ತುಮಕೂರು ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಯಿಂದ ಭಾಗವಹಿಸಿದ್ದ ಬಂಡಾಯ ಲೇಖಕರು, ಯುವಬರಹಗಾರರು.   

ತುಮಕೂರು: ಸುಳ್ಳಿನ ಸಾಮ್ರಾಜ್ಯದಲ್ಲಿ ಸತ್ಯವನ್ನು ಪ್ರತಿಪಾದಿಸುವ ಎದೆಗಾರಿಕೆಯನ್ನುಯುವ ಬರಹಗಾರರು ಬೆಳೆಸಿಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ದೊರೆರಾಜ್ ಸಲಹೆ ನೀಡಿದರು.

ಇಲ್ಲಿನ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯಿಂದ ನಡೆದ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಸಮಾನತೆ, ಕ್ರೌರ್ಯದ ವ್ಯವಸ್ಥೆ ನಮ್ಮನ್ನು ಜಗ್ಗುತ್ತಿದೆ. ಈ ವ್ಯವಸ್ಥೆಯೊಳಗೆ ಯುವಕರು ದುರ್ಬಲರಾಗುತ್ತಿದ್ದಾರೆ. ಆದರೆ, ಯುವ ಬರಹಗಾರರು ದುರ್ಬಲರಾಗದೇ ಧೈರ್ಯದಿಂದ, ನಿರಂಕುಶಮತಿಗಳಾಗಿ ವ್ಯವಸ್ಥೆಯನ್ನು ಮಾನವೀಯಕರಣಗೊಳಿಸಬೇಕು. ಧೈರ್ಯ, ಆತ್ಮವಿಶ್ವಾಸ, ಸ್ಪಷ್ಟತೆ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ‘ಸಮಾಜದಲ್ಲಿ ಇಂದು ಅಸಹನೆ, ಅಸೂಹೆ, ದ್ವೇಷ, ಅಸ್ಪಷ್ಟತೆ ವಿಜೃಂಭಿಸುತ್ತಿದೆ. ವೈದಿಕ ಗುಲಾಮಗಿರಿಯ ಜತೆಗೆ ಸಾಂಸ್ಕೃತಿಕ ಗುಲಾಮಗಿರಿಯೂ ಬೆಳೆಯುತ್ತಿದೆ. ನಾವು ಇದರ ಒಂದು ಭಾಗವಾಗುತ್ತಿರುವುದು ಆತಂಕದ ಸಂಗತಿ. ಇಂತಹ ಸಂದರಭದಲ್ಲಿ ಯುವ ಬರಹಗಾರರು ಕೆಡುಕಿನ ಸಮಾಜದಲ್ಲಿ ಸರಿ ತಪ್ಪುಗಳನ್ನು ಹೇಳಬೇಕು. ಸತ್ಯ ಹೇಳುವುದಕ್ಕೆ ಹೆದರಬಾರದು. ತಪ್ಪು ಗ್ರಹಿಕೆ ಮನಸ್ಸಲ್ಲಿ ಇಟ್ಟುಕೊಳ್ಳಬಾರದು’ ಎಂದರು.

ಲೇಖಕ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, ‘ಪ್ರಸ್ತುತ ದೇಶದ ವಾತಾವರಣ ಭಯ ಹುಟ್ಟಿಸುತ್ತಿದೆ. ದೇಶ ಎದುರಿಸುತ್ತಿರುವ ಅನೇಕ ಬಿಕ್ಕಟ್ಟುಗಳಿಗೆ ಯುವ ಜನಾಂಗ ತಲ್ಲಣಗೊಂಡಿದೆ. ನಾಳೆ ಹೇಗೋ ಎಂಬ ಆತಂಕದ ನಡುವೆ ನಮ್ಮ ಜೀವನ ಸಾಗುತ್ತಿದೆ. ಬಹುತ್ವದ ದೇಶದಲ್ಲಿ ಹರಿದು ಹಂಚಿ ಹೋಗುವ ಆತಂಕದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಹೊಸ ಸಮಾನ, ಕನಸಿನ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಾಗಬೇಕಿದೆ. ಪ್ರಶ್ನೆ ಕೇಳುತ್ತಲೇ ಬೆಳೆಯಬೇಕಿದೆ’ ಎಂದು ಹೇಳಿದರು.

ಪತ್ರಕರ್ತ ಬಿ.ಎಂ.ಹನೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಇಂದು ಎಲ್ಲಾ ಕ್ಷೇತ್ರದಲ್ಲೂ ಬೂಟಾಟಿಕೆ ಇದೆ. ನಮ್ಮ ಇಂದಿನ ರಾಜಕೀಯದಲ್ಲಿ ಆದರ್ಶ ವ್ಯಕ್ತಿಗಳು ಅಂದುಕೊಂಡವರೆ ಕಪಟಿಗಳಾಗುತ್ತಿದ್ದಾರೆ. ಇಂತಹವರನ್ನು ನಾವು ಪಕ್ಕಕ್ಕೆ ಸರಿಸಿ ಬದ್ಧತೆ ಇರುವವರನ್ನು ಅನುಸರಿಸಬೇಕಿದೆ. ಎಲ್ಲರನ್ನೂ, ಎಲ್ಲವನ್ನೂ ಪ್ರಶ್ನಿಸಬೇಕು. ಆದರೆ, ಪ್ರಶ್ನಿಸುವಾಗ ನಿರ್ಭೀತಿ, ವಿನಯವಂತಿಕೆ, ಜ್ಞಾನದಾಹ ನಮ್ಮಲ್ಲಿ ಇರಬೇಕು’ ಎಂದರು.

ಡಾ.ಭಕ್ತರಹಳ್ಳಿ ಕಾಮರಾಜ್, ಡಾ.ರಂಗಾರೆಡ್ಡಿ ಕೋಡರಾಂಪುರ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.