ಮಧುಗಿರಿ: ಖಾಸಗಿ ವಾಹಿನಿ ಝೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದ ಮಂಜಮ್ಮ (30) ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು.
ತಾಲ್ಲೂಕಿನ ಡಿ.ವಿ.ಹಳ್ಳಿ ಗ್ರಾಮದ ನಿವಾಸಿ ಅಂಧರಾಗಿದ್ದ ಮಂಜಮ್ಮ ಕಿಡ್ನಿ ವೈಫಲ್ಯದಿಂದಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾದರು.
ಮಂಗಳವಾರ ಮಧ್ಯಾಹ್ನ ಕುಟುಂಬ ಹಾಗೂ ಗ್ರಾಮಸ್ಥರು ಸೇರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.
ಖಾಸಗಿ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪಾರ ಜನಮನ್ನಣೆ ಗಳಿಸಿದ್ದರು. ಅವರು ಈ ಹಿಂದೆ ಪಟ್ಟಣದ ದಂಡಿನ ಮಾರಮ್ಮ ದೇವಾಲಯದ ಮುಂಭಾಗದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹಾಡು ಹೇಳುತ್ತಿದ್ದರು. ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದರು.
ದೇವಾಲಯದ ಮುಂದೆ ಹಾಡು ಹೇಳುತ್ತಿದ್ದುದನ್ನು ಗಮನಿಸಿದ ಖಾಸಗಿ ವಾಹಿನಿಯ ಸರಿಗಮಪ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಹಾಡಿ ಜನಮನ ಗೆದ್ದಿದ್ದರು. ನಟ ಜಗ್ಗೇಶ್ ಹಾಗೂ ಅವರ ಅಭಿಮಾನಿಗಳು ನೂತನವಾಗಿ ಮನೆ ನಿರ್ಮಿಸಿ ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರು ಇಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.