ADVERTISEMENT

ಅಸಂಘಟಿತ ಸ್ಥಿತಿಯಲ್ಲಿ ಒಕ್ಕಲಿಗ ಸಮುದಾಯ: ಸ್ವಾಮೀಜಿ ಆತಂಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 6:30 IST
Last Updated 11 ಸೆಪ್ಟೆಂಬರ್ 2023, 6:30 IST
<div class="paragraphs"><p> ಮಂಗಳನಾಥ ಸ್ವಾಮೀಜಿ, ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ, ಶಾಸಕ ಟಿ.ಬಿ.ಜಯಚಂದ್ರ, ಜಿ.ಪಂ ಸಿಇಒ ಜೆ.ಪ್ರಭು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಅನುಪಮಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮರಿಯಪ್ಪ, ಜಿಲ್ಲಾ ಖಜಾನೆಯ ಉಪ ನಿರ್ದೇಶಕಿ ಆರ್‌.ವಿ.ಉಮಾ, ಮುಖಂಡರಾದ ಮುರಳೀಧರ್‌ ಹಾಲಪ್ಪ, ನರಸೇಗೌಡ, ಬೋರೇಗೌಡ, ಬೆಳ್ಳಿ ಲೋಕೇಶ್‌ ಇದ್ದಾರೆ</p></div>

ಮಂಗಳನಾಥ ಸ್ವಾಮೀಜಿ, ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ, ಶಾಸಕ ಟಿ.ಬಿ.ಜಯಚಂದ್ರ, ಜಿ.ಪಂ ಸಿಇಒ ಜೆ.ಪ್ರಭು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಅನುಪಮಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮರಿಯಪ್ಪ, ಜಿಲ್ಲಾ ಖಜಾನೆಯ ಉಪ ನಿರ್ದೇಶಕಿ ಆರ್‌.ವಿ.ಉಮಾ, ಮುಖಂಡರಾದ ಮುರಳೀಧರ್‌ ಹಾಲಪ್ಪ, ನರಸೇಗೌಡ, ಬೋರೇಗೌಡ, ಬೆಳ್ಳಿ ಲೋಕೇಶ್‌ ಇದ್ದಾರೆ

   

ತುಮಕೂರು: ಒಕ್ಕಲಿಗ ಸಮಾಜ ಮೀಸಲಾತಿ ಎಂಬ ಪೆಡಂಭೂತಕ್ಕೆ ಸಿಕ್ಕಿ ನರಳುತ್ತಿದೆ. ಸಮುದಾಯದ ಯುವಕರು ಅರ್ಹತೆ ಇದ್ದರೂ  ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂದು ಕಿತ್ನಾಮಂಗಲ-ಕಾಡುಮತ್ತಿಕೆರೆ ಅರೇ ಶಂಕರ ಮಠದ ಸಿದ್ಧರಾಮ ಚೈತನ್ಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಮೀಸಲಾತಿಯ ಹೊಡೆತದಿಂದ ಸಮುದಾಯದ ಯುವಕರು ನರಳುತ್ತಿದ್ದಾರೆ. ಸಮಾಜ ಅಸಂಘಟಿತ ಸ್ಥಿತಿಯಲ್ಲಿದೆ. ಜನಸಂಖ್ಯಾವಾರು ಮೀಸಲಾತಿ ಹೆಚ್ಚಳದ ಹೋರಾಟ ತೀವ್ರಗೊಳ್ಳಬೇಕು. ಎಲ್ಲ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರ ಸಿಗಬೇಕು. ರಾಜಕೀಯ ಹೊರೆತು ಪಡಿಸಿ ಎಲ್ಲರು ಒಂದಾಗಬೇಕು ಎಂದು ಕರೆ ನೀಡಿದರು.

ಮಕ್ಕಳ ಬೆನ್ನು ತಟ್ಟುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ನಿಜಕ್ಕೂ ವಿದ್ಯಾರ್ಥಿಗಳ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುತ್ತಿದೆಯೇ? ಉಚಿತವಾಗಿ ವೈದ್ಯಕೀಯ, ಎಂಜಿನಿಯರಿಂಗ್ ಸೀಟು, ಸುಲಭವಾಗಿ ವಿದ್ಯಾರ್ಥಿ ನಿಲಯಗಳು ಸಿಗುತ್ತಿವೆಯೇ? ಯಾವುದಕ್ಕಾಗಿ ಈ ಪುರಸ್ಕಾರ? ಎಂದು ಪ್ರಶ್ನಿಸಿದರು.

ಸಮಾಜದ ಯುವಕರಿಗೆ ಉನ್ನತ ಶಿಕ್ಷಣ, ಉದ್ಯೋಗ ಸಿಗಬೇಕು. ಆಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ. ಇದುವರೆಗೆ ಸಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ನಾಯಕರು ಕಾಣಿಸುತ್ತಿಲ್ಲ. ಸಮಸ್ಯೆ ಕೇಳದವರು ಯಾವ ಪುರುಷಾರ್ಥಕ್ಕೆ ನಮ್ಮ ನಾಯಕನಾಗಬೇಕು ಎಂದೂ ಪ್ರಶ್ನೆ ಮಾಡಿದರು.

ಒಕ್ಕಲಿಗ ನೌಕರರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವತ್ಥ ಕುಮಾರ್, ‘ಸಮುದಾಯದ ಬಡ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ವೇದಿಕೆ ಸ್ಥಾಪಿಸಲಾಗಿದೆ. ಈ ಕಾರ್ಯಕ್ರಮ ಸಾಧಕರು ಮತ್ತು ಸಾಧನೆಯ ಕನಸು ಕಂಡವರ ಸಮಾಗಮ. ಗುರಿ ಇದ್ದರೆ ಏನಾದರೂ ಸಾಧಿಸಬಹುದು. ಎಲ್ಲರು ಗುರಿಯ ಕಡೆಗೆ ಸಾಗಬೇಕು’ ಎಂದು ಸಲಹೆ ಮಾಡಿದರು.

ಜಿ.ಪಂ ಸಿಇಒ ಜೆ.ಪ್ರಭು, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್‌.ಅನುಪಮಾ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮರಿಯಪ್ಪ, ಜಿಲ್ಲಾ ಖಜಾನೆಯ ಉಪ ನಿರ್ದೇಶಕಿ ಆರ್‌.ವಿ.ಉಮಾ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಪಾಲಿಕೆಯ ಸದಸ್ಯ ಜೆ.ಕುಮಾರ್‌, ಮುಖಂಡರಾದ ಮುರಳೀಧರ್‌ ಹಾಲಪ್ಪ, ನರಸೇಗೌಡ, ಬೋರೇಗೌಡ, ಬೆಳ್ಳಿ ಲೋಕೇಶ್‌, ನಳಿನಾ ಕುಮಾರಿ, ವೇದಿಕೆಯ ಪದಾಧಿಕಾರಿಗಳಾದ ರುಕ್ಮಿಣಿ, ಪುಟ್ಟಸ್ವಾಮಿ, ಜಿ.ಶಿವಣ್ಣ ಇತರರು ಹಾಜರಿದ್ದರು.

ಭೂಮಿ ನಂಬಿದವರಿಗೆ ಹೆಣ್ಣು ಕೊಡುತ್ತಿಲ್ಲ

ಪ್ರಸ್ತುತ ದಿನದಲ್ಲಿ ವ್ಯವಸಾಯ ಕಷ್ಟವಾಗುತ್ತಿದ್ದು ರೈತ ಬಡವ ಆಗುತ್ತಿದ್ದಾನೆ. ಭೂಮಿ ನಂಬಿ ಬದುಕುವ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿಲ್ಲ’ ಎಂದು ಶಾಸಕ ಟಿ.ಬಿ.ಜಯಚಂದ್ರ ಆತಂಕ ವ್ಯಕ್ತಪಡಿಸಿದರು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಹೈನುಗಾರಿಕೆ ಸೇರಿದಂತೆ ಇತರೆ ಉಪ ಕಸುಬಿನಲ್ಲಿ ತೊಡಗಿಸಿಕೊಳ್ಳಬೇಕು. ಮೀಸಲಾತಿಯೇತರ ಉದ್ಯೋಗ ಸೃಷ್ಟಿಯಾಗುತ್ತಿದೆ. ಉನ್ನತ ಶಿಕ್ಷಣದ ಮೂಲಕ ಉದ್ಯೋಗ ಗಿಟ್ಟಿಸಿ ಕೊಳ್ಳಬೇಕು ಎಂದು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.