ADVERTISEMENT

ಅಡಿಕೆ ನಿಷೇಧ ಸತ್ಯವಲ್ಲ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 9:37 IST
Last Updated 22 ಮಾರ್ಚ್ 2014, 9:37 IST
ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತರೀಕೆರೆಯಲ್ಲಿ ಶುಕ್ರವಾರ ರೋಡ್ ಶೋ ಮತ್ತು ಪಾದ ಯಾತ್ರೆ ಮೂಲಕ ಮತ ಯಾಚಿಸಿದರು.
ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತರೀಕೆರೆಯಲ್ಲಿ ಶುಕ್ರವಾರ ರೋಡ್ ಶೋ ಮತ್ತು ಪಾದ ಯಾತ್ರೆ ಮೂಲಕ ಮತ ಯಾಚಿಸಿದರು.   

ತರೀಕೆರೆ: ಕೇಂದ್ರ ಸರ್ಕಾರ ಅಡಿಕೆ ನಿಷೇಧ ಮಾಡುವಂತೆ ಸುಪ್ರೀಂ ಕೋರ್ಟ್‌­ನಲ್ಲಿ  ಪ್ರಮಾಣ ಪತ್ರ ಸಲ್ಲಿಸಿದೆ ಎಂಬುದು ವಿರೋಧ ಪಕ್ಷಗಳ ಪಿತೂ­ರಿಯೇ ಹೊರತು ಸತ್ಯವಲ್ಲ. ಒಂದೊಮ್ಮೆ ಅದರ ಪ್ರತಿ ಒದಗಿಸಿದಲ್ಲಿ ರಾಜಕೀಯ ನಿವೃತ್ತಿಹೊಂದಲು ಸಿದ್ಧ. ಅದರಂತೆ ಆರೋಪ ಮಾಡುತ್ತಿರುವವರು ಈ ಸವಾಲಿಗೆ ಬದ್ಧರಾಗಬೇಕು ಎಂದು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜಯ­ಪ್ರಕಾಶ್ ಹೆಗ್ಡೆ  ಸವಾಲು ಹಾಕಿದರು.

ಪಟ್ಟಣದ ಕೋಡಿಕ್ಯಾಂಪ್ ನಿಂದ ಗಾಂಧಿ ಸರ್ಕಲ್ ವರೆಗೆ ರೋಡ್ ಶೋ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತ­ನಾಡಿದರು.
ತರೀಕೆರೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ಕುರಿತಂತೆ ಇರುವ ಪ್ರಸ್ತಾವನೆಯನ್ನು ವ್ಯಾಪಕಗೊಳಿಸಿ ತುಮಕೂರಿನಿಂದ ಶಿವಮೊಗ್ಗ ವರೆಗೆ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧವಾಗಿದೆ ಎಂದರು. ಅಜ್ಜಂಪುರ, ಶಿವನಿ ರೈಲ್ವೆ ನಿಲ್ದಾಣಗಳ ಉನ್ನತೀಕರಣ ಈಗಾಗಲೇ ನಡೆಯುತ್ತಿದ್ದು,ತರೀಕೆರೆ ನಿಲ್ದಾಣವನ್ನು ಉನ್ನತೀಕರಣಕ್ಕೆ ಈಗಾ­ಗಲೇ ಕ್ರಮಕೈಗೊಳ್ಳಲಾಗಿದೆ ಎಂದರು. ಅಜ್ಜಂಪುರ,ಶಿವನಿ, ಬೇಲೇನ­ಹಳ್ಳಿಗಳಲ್ಲಿ ಏಕ್ಸ್ ಪ್ರೆಸ್ ರೈಲು ನಿಲುಗಡೆಗೆ ಅಗತ್ಯ ಕ್ರಮ ವಹಿಸಲಾಗಿರುವುದಾಗಿ ತಿಳಿಸಿ­ದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತ­ನಾಡಿ, ಬಿಜೆಪಿ ಅಭ್ಯರ್ಥಿ ಶೋಭ ಕರಂದ್ಲಾಜೆ ಹೊರಗಿನವರು, ವಿವಿದೆಡೆ ಟಿಕೇಟ್ ಗಾಗಿ ಪ್ರಯತ್ನಿಸಿ ಎಲ್ಲೂ ದೊರೆಯದಿದ್ದಾಗ ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಹಿಂದೆ ಕೆಜೆಪಿಯಲ್ಲಿ­ದ್ದಾಗ ಬಿಜೆಪಿಯನ್ನು ಯದ್ವಾತದ್ವಾ ಟೀಕಿಸಿದವರಿಗೆ ಈಗ ಬಿಜೆಪಿಯಿಂದ ಸ್ಪರ್ಧಿಸಿ ಮತ ಕೇಳಲು ಯಾವ ನೈತಿಕತೆ ಇದೆ. ಯಡಿಯೂರಪ್ಪ ಭ್ರರಷ್ಟಾಚಾರ­ದಲ್ಲಿ ಜೈಲು ಪಾಲಾಗಿ ಈಗ ನೈತಿಕತೆ ಬೋಧಿಸುವ ಅಗತ್ಯತೆ ಇಲ್ಲ.  ಜಯ­ಪ್ರಕಾಶ್ ಹೆಗ್ಡೆ ಇದೇ ಕ್ಷೇತ್ರದವರಾಗಿದ್ದು ಸದಾ ಜನಗಳ ಜೊತೆಯಲ್ಲಿಯೇ ಇರುವವರು.ಹಾಗಾಗಿ ಮತದಾರ ಕಾಂಗ್ರೆಸ್ ನ ಜಯಪ್ರಕಾಶ್ ಹೆಗ್ಡೆ ಅವರಿಗೆ ಮತ ನೀಡಿ ಮತ್ತೊಮ್ಮೆ ಜಯಶೀಲರನ್ನಾಗಿ ಮಾಡಬೇಕೆಂದು ಕೋರಿದರು.


ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬ­ಲಿಸುವ ಅಗತ್ಯತೆ ಇದೆ. ಅದರೊಂದಿಗೆ ಹೊರಗಿನಿಂದ ಬಂದವರಿಗೆ ತಕ್ಕ ಪಾಠ ಕಲಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ, ಪುರಸಭೆ ಅಧ್ಯಕ್ಷ ಸುನಿಲ್ ದತ್ತ. ಪುರಸಭೆ ಸದಸ್ಯರು, ವಿವಿಧ ಬ್ಲಾಕ್ ಗಳ ಅಧ್ಯಕ್ಷರು, ಪದಾಧಿ­ಕಾರಿಗಳು, ಕಾಂಗ್ರೆಸ್ ಮುಖಂಡರು ಇದ್ದರು. ಜಿಲ್ಲಾ ಸಮಿತಿ ಮುಖಂಡರ ಗೈರು: ಕಾರ್ಯಕ್ರಮದಲ್ಲಿ ಜಿಲ್ಲೆಯ ಕಾಂಗ್ರೆಸ್ ಸಮಿತಿ ಮುಖಂಡರು ಯಾರು ಸಹಾ ಪಾಲ್ಗೊಳ್ಳದಿರುವುದು ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT