ADVERTISEMENT

ಅಣ್ಣಾ ಬೆಂಬಲಿಸಿ ಬೈಕ್ ರ‌್ಯಾಲಿ- ಜಾಥಾ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2011, 7:05 IST
Last Updated 20 ಆಗಸ್ಟ್ 2011, 7:05 IST
ಅಣ್ಣಾ ಬೆಂಬಲಿಸಿ ಬೈಕ್ ರ‌್ಯಾಲಿ- ಜಾಥಾ
ಅಣ್ಣಾ ಬೆಂಬಲಿಸಿ ಬೈಕ್ ರ‌್ಯಾಲಿ- ಜಾಥಾ   

ಉಡುಪಿ: ಪ್ರಬಲ ಲೋಕಪಾಲ ಮಸೂದೆಯನ್ನು ಬೆಂಬಲಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಉಡುಪಿ ವಲಯದ ಸದಸ್ಯರು ಶುಕ್ರವಾರ ಬೆಳಿಗ್ಗೆ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದರು.

ಕೇಂದ್ರ ಸರ್ಕಾರ ಅಣ್ಣಾ ಹಜಾರೆಯವರ ಆಂದೋಲನವನ್ನು ಹತ್ತಿಕ್ಕಲು ನಡೆಸುತ್ತಿರುವ ಕ್ರಮವನ್ನು ಖಂಡಿಸಿದ ಸದಸ್ಯರು, ಕೇಂದ್ರದ ಮುಂದಿಟ್ಟಿರುವ ಬೇಡಿಕೆಯನ್ನು ದೇಶದ ಹಿತದೃಷ್ಟಿಯಿಂದ ಪುನರ್ ಪರಶೀಲಿಸಬೇಕು ಎಂದು ಆಗ್ರಹಿಸಿದರು.

ರ‌್ಯಾಲಿಯಲ್ಲಿ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಧನಂಜಯ ಪೂಜಾರಿ, ಕಾಪು ವಲಯದ ಪ್ರವೀಣ್, ಪ್ರಮೋದ್, ವಾಸುದೇವ ರಾವ್, ರತನ್ ಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

`ಭ್ರಷ್ಟಾಚಾರ ವಿರೋಧಿ ಸಮಿತಿ~ ಜಾಥಾಕ್ಕೆ ಜನರ ಕೊರತೆ ಭಾರತ ಸ್ವಾಭಿಮಾನ ಟ್ರಸ್ಟ್, ಪತಂಜಲಿ ಯೋಗ ಸಮಿತಿ, ಹಿರಿಯ ನಾಗರಿಕರ ವೇದಿಕೆ, ಬಳಕೆದಾರರ ವೇದಿಕೆ ಸೇರಿದಂತೆ ಉಡುಪಿಯ ಸುಮಾರು 20 ಸಂಘ ಸಂಸ್ಥೆಗಳು ಸೇರಿಕೊಂಡು `ಭ್ರಷ್ಟಾಚಾರ ವಿರೋಧಿ ಸಮಿತಿ~ಯನ್ನು ಹುಟ್ಟುಹಾಕಿದ್ದರು.

ಗಾಂಧಿವಾದಿ ಅಣ್ಣಾ ಹಜಾರೆ ಬೆಂಬಲಿಸಿ ನಡೆಸುವ ಹೋರಾಟ ಸೇರಿದಂತೆ ಮುಂಬರುವ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನೆಲೆಯಲ್ಲಿ ಈ ಸಮಿತಿಯನ್ನು ಅಸ್ತಿತ್ವಕ್ಕೆ ಬಂದಿತ್ತು. ಆದರೆ ಶುಕ್ರವಾರ ಈ ಸಮಿತಿ ನಡೆಸಿದ ಜಾಥಾಕ್ಕೆ ಮಾತ್ರ ಬೆರಳೆಣಿಕೆಯಷ್ಟು ಜನರೂ ಬರಲಿಲ್ಲ.

ಮಧ್ಯಾಹ್ನ 3.30ಕ್ಕೆ ಬೋರ್ಡ್ ಹೈಸ್ಕೂಲ್ ಬಳಿ ಸಮಿತಿಯಿಂದ ಸಭೆ ಆಯೋಜಿಸಲಾಗಿತ್ತು. ಬಳಿಕ ಅಲ್ಲಿಂದ ಜಾಥಾ ಮೂಲಕ ಬನ್ನಂಜೆ ಮಾರ್ಗವಾಗಿ ಸಾಗಿ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಮಿತಿ ತೀರ್ಮಾನಿಸಿತ್ತು. ಆದರೆ, ಸಮಿತಿಯ ಈ ಮೆರವಣಿಯಲ್ಲಿ ನಿರೀಕ್ಷೆಯಷ್ಟು ಜನ ಭಾಗವಹಿಸಲಿಲ್ಲ. ಸಂಘದ ಸದಸ್ಯರು ಸುರಿಯುವ ಮಳೆಯ ಮಧ್ಯೆ ಕೊಡೆ ಹಿಡಿದು ಜಾಥಾ ಕೈಗೊಂಡರು. 

 ಸಮಿತಿಯ ಅಧ್ಯಕ್ಷರಾಗಿ ರಾಘವೇಂದ್ರ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಎ.ಪಿ.ಕೊಡಂಚ, ಸಹ ಸಂಚಾಲಕ ವಾಸುದೇವ ಭಟ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್ ಕೋಟ್ಯಾನ್, ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಯಾಸ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ವಿಶ್ವಜ್ಞ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಎಸ್.ಎಸ್.ತೋನ್ಸೆ, ಶಂಭು ಶೆಟ್ಟಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.