ADVERTISEMENT

ಅರ್ಧ ವರ್ಷ ಕಳೆದರೂ ಪಠ್ಯಪುಸ್ತಕವಿಲ್ಲ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 9:18 IST
Last Updated 9 ಅಕ್ಟೋಬರ್ 2017, 9:18 IST
ತಾಲ್ಲೂಕು ಮಟ್ಟದ ‘ಮಕ್ಕಳ ಹಕ್ಕುಗಳ ಸಂಸತ್’ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಭಾಗಿಯಾದ ಮಕ್ಕಳು.
ತಾಲ್ಲೂಕು ಮಟ್ಟದ ‘ಮಕ್ಕಳ ಹಕ್ಕುಗಳ ಸಂಸತ್’ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಭಾಗಿಯಾದ ಮಕ್ಕಳು.   

ಕಾರ್ಕಳ: ‘ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಶಾಲಾ ಪಠ್ಯಪುಸ್ತಕ ಅರ್ಧ ಶೈಕ್ಷಣಿಕ ವರ್ಷ ಕಳೆದರೂ ದೊರಕಿಲ್ಲ. ಇದರಿಂದ ನಮ್ಮ ಶಿಕ್ಷಣಕ್ಕೆ ತುಂಬಾ ತೊಡಕಾಗುತ್ತಿದೆ’ ಎಂದು ಕಾಂತರಗೋಳಿ ಶಾಲಾ ವಿದ್ಯಾರ್ಥಿ ವಿಶ್ವಾಸ್ ಹಾಗೂ ಅತ್ತೂರು ಸೇಂಟ್ ಲಾರೆನ್ಸ್‌ ಪ್ರೌಢಶಾಲಾ ವಿದ್ಯಾರ್ಥಿ ನೀಲ್ ರೋಹನ್ ಆರೋಪಿಸಿದರು.

ತಾಲ್ಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ತಾಲ್ಲೂಕು ಎಸ್.ಡಿ.ಎಂ.ಸಿ. ಸಮನ್ವಯ ವೇದಿಕೆ, ರೋಟರಿ ಕ್ಲಬ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯಕ್ತ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಮಕ್ಕಳ ಹಕ್ಕುಗಳ ಸಂಸತ್ ಕಾರ್ಯಕ್ರಮದ ಸಂವಾದದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

‘ಸರ್ಕಾರ ಪಂಚಾಯಿತಿಗೊಂದು ಶಾಲೆಯನ್ನು ತೆರೆಯುವುದಾಗಿ ಚರ್ಚೆ ನಡೆಸಿದ್ದು, ಅದನ್ನು ಕೈಬಿಟ್ಟದ್ದೇಕೆ’ ಎಂದು ನಗರದ ಸುಂದರ ಪುರಾಣಿಕ್ ಪ್ರೌಢಶಾಲೆಯ ವಿದ್ಯಾರ್ಥಿ ಸುಗಂದ್ ಪ್ರಶ್ನಿಸಿದರು. ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುವ ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಯಾಕೆ ಕಳುಹಿಸುದಿಲ್ಲ?’, ‘ತರಗತಿ ಕೋಣೆಯ ಹತ್ತಿರ ವಿದ್ಯುತ್ ತಂತಿ ಹಾದು ಹೋಗಿದೆ’, ‘ತರಗತಿ ಎದುರಿನ ರಸ್ತೆತಲ್ಲಿ ವಿಪರೀತ ವಾಹನ ಸಂಚಾರವಿದ್ದು, ಇದರಿಂದ ಪಾಠ ಕೇಳಲು ಕಷ್ಟವಾಗುತ್ತದೆ’, ‘ಸರ್ಕಾರ ಮದ್ಯದ ಅಂಗಡಿಗಳನ್ನು ಯಾಕೆ ಮುಚ್ಚಬಾರದು?’, ‘ತರಗತಿಗೊಬ್ಬ ರಂತೆ ಶಿಕ್ಷಕರನ್ನು ನೇಮಿಸಿದರೆ ಉತ್ತಮ ವಲ್ಲವೇ?’, ‘ಶ್ರೀಮಂತ ವರ್ಗ ಮತ್ತು ಬಡವರ್ಗದ ಮಕ್ಕಳು ಅಂಗ್ಲಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಎನ್ನುವ ವ್ಯವಸ್ಥೆಯಲ್ಲಿ ತಾರತಮ್ಯದ ಶಿಕ್ಷಣ ಪಡೆ ಯುತ್ತಿರುವುದು?’ ಇತ್ಯಾದಿ ಪ್ರಶ್ನೆಗಳನ್ನು ಮಕ್ಕಳು ಜನಪ್ರತಿನಿಧಿಗಳಿಗೆ ಕೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ್.ಎಸ್.ಕೋಟ್ಯಾನ್ ಮಕ್ಕಳ ಪ್ರಶ್ನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ, ಮಕ್ಕಳು ಹೇಳಿದ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಜ್ಯೋತಿ ಹರೀಶ್, ಸುಮಿತ್‌ ಶೆಟ್ಟಿ, ದಿವ್ಯಾಶ್ರೀ ಗಿರೀಶ್ ಅಮೀನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೇಶವ್ ಶೆಟ್ಟಗಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿವಾನಂದ್, ವರಂಗ ಪಂಚಾಯಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ, ರಾಜ್ಯ ಎಸ್.ಡಿ.ಎಂ.ಸಿ ಕಾರ್ಯದರ್ಶಿ ಶೋಭಾ ಭಾಸ್ಕರ್, ತಾಲ್ಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ದಿವಾಕರ್ ಕುಮಾರ್, ಶಿಕ್ಷಣ ಸಂಪನ್ಮೂಲ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಶ್ರೀಧರ್ ರಾವ್, ಬೆಳ್ತಂಗಡಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯ ಜಾಕೀರ್ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.