ADVERTISEMENT

ಉಡುಪಿ: ಕಾನೂನು ಸಾಕ್ಷರತಾ ಕಾರ್ಯಕ್ರಮ:ಸೈಬರ್ ಅಪರಾಧ ಪತ್ತೆಗೆ ತರಬೇತಿ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 8:25 IST
Last Updated 10 ನವೆಂಬರ್ 2012, 8:25 IST

ಉಡುಪಿ: `ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನದ ಬೆಳೆವಣಿಗೆ ಶೀಘ್ರಗತಿಯಲ್ಲಿ ಆಗುತ್ತಿದೆ. ಅದೇ ರೀತಿ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿದ್ದು, ಇಂತಹ ಅಪರಾಧ ಪ್ರಕರಣಗಳ ತನಿಖೆ ಮಾಡುವ ಅಧಿಕಾರಿಗಳಿಗೆ ತರಬೇತಿ ನೀಡುವ ಅಗತ್ಯ ಇದೆ~ ಎಂದು ಉಡುಪಿ ಜಿಲ್ಲಾ ತ್ವರಿತ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಜಿ.ಎಸ್. ರೇವಣಕರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಉಡುಪಿ ಜಿಲ್ಲಾ ವಕೀಲರ ಸಂಘ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ದಂಡ ಸಂಹಿತೆ, ಇತರ ಕಾನೂನುಗಳಿಗೂ ಸೈಬರ್ ಅಪರಾಧಗಳಿಗೂ ಬಹಳಷ್ಟು ವ್ಯತ್ಯಾಸ ಇದೆ. ಇತರೆ ಪ್ರಕರಣಗಳ ತನಿಖೆಯಲ್ಲಿ ಆಗುವಷ್ಟು ಪ್ರಗತಿ ಸೈಬರ್ ಅಪರಾಧಗಳಲ್ಲಿ ಆಗದಿರುವುದನ್ನು ಗಮನಿಸಬಹುದು.

ಪ್ರಪಂಚದ ಯಾವುದಾದರೂ ಮೂಲೆಯಲ್ಲಿ ಕುಳಿತು ಸೈಬರ್ ಅಪರಾಧ ಎಸಗಲು ಅವಕಾಶ ಇರುವುದೇ ಇದಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ (ಎವಿಡೆನ್ಸ್ ಆಕ್ಟ್) ಇರುವ ಸಾಕ್ಷ್ಯಗಳನ್ನು ನೀಡಲು ಸೈಪರ್ ಅಪರಾಧಗಳಲ್ಲಿ ಸಾಧ್ಯವಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ಎಲೆಕ್ಟ್ರಾನಿಕ್ಸ್ ದಾಖಲೆಗಳನ್ನು ಈ ಪ್ರಕರಣಗಳಲ್ಲಿ ಒದಗಿಸಬೇಕಾಗುತ್ತದೆ. ಆದ್ದರಿಂದ ಸೈಪರ್ ಅಪರಾಧಗಳ ತನಿಖೆ ಮಾಡುವವರಿಗೆ ಹೆಚ್ಚಿನ ತರಬೇತಿ ನೀಡಬೇಕು  ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ನರೇಂದ್ರ ಕುಮಾರ್ ಗುಣಕಿ, ಕಾನೂನು ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರವನ್ನು ದೇಶದಲ್ಲಿ ಜಾರಿಗೆ ತರಲಾಗಿದೆ.

ಅಗತ್ಯ ಇರುವವರಿಗೆ ಕಾನೂನು ಸೇವೆಗಳನ್ನು ನೀಡುವಲ್ಲಿ ರಾಜ್ಯ ಮುಂದಿದೆ ಎಂದು ಹೇಳಿದರು.
ಜಿಲ್ಲಾ ಸಹಾಯಕ ಸರ್ಕಾರಿ ವಕೀಲ ಗುರುರಾಜ ಐತಾಳ್ ಅವರು ಸೈಬರ್ ಕಾನೂನು ಬಗ್ಗೆ ಮಾಹಿತಿ ನೀಡಿದರು.
ಮದುಸೂಧನ್ ಸಾಮಗ ಪ್ರಾರ್ಥಿಸಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾವಿತ್ರಿ ವಿ ಭಟ್ ಸ್ವಾಗತಿಸಿದರು. ವಕೀಲೆ ದೀಪಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ. ವಿಜಯಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.