ADVERTISEMENT

ಉಡುಪಿ: ರೈಲ್ ರೋಖೊ 15ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:15 IST
Last Updated 11 ಫೆಬ್ರುವರಿ 2011, 9:15 IST

ಉಡುಪಿ: ಕರಾವಳಿ ಭಾಗದ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯ ಖಂಡಿಸಿ ಇದೇ 15ರಂದು ನಗರದ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ‘ರೈಲ್ ರೋಖೊ’ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಭಟನೆಗೆ ಚಾಲನೆ ನೀಡುವರು ಎಂದು ಉಡುಪಿ ರೈಲ್ವೆ ಯಾತ್ರಿ ಸಂಘ ತಿಳಿಸಿದೆ.

ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರು-ಮಂಗಳೂರು ರಾತ್ರಿ ರೈಲು ಈ ಬಾರಿಯೂ ಕಾರವಾರಕ್ಕೆ ವಿಸ್ತರಣೆ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಜ. 7ರಿಂದ 9ರವರೆಗೆ ಪುಣೆಯಲ್ಲಿ ನಡೆದ ಐಆರ್‌ಟಿಟಿಸಿ (ಭಾರತೀಯ ರೈಲ್ವೆ ವೇಳಾಪಟ್ಟಿ ಸಮಿತಿ) ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಈ ಬಗ್ಗೆ ಈ ಪ್ರದೇಶದ ಜನರ ಆಕ್ರೋಶ ವ್ಯಕ್ತಪಡಿಸುವ ಸಲುವಾಗಿ 15ರಂದು ಮೂರು ರೈಲುಗಳನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ತಡೆಹಿಡಿಯುತ್ತೇವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ 1ರಂದು ಪತ್ರ ಬರೆದು ಮುಂಚಿತವಾಗಿಯೇ ವಿಷಯ ತಿಳಿಸಿದ್ದೇವೆ’ ಎಂದರು.

‘ಶಾಸಕರಾದ ರಘುಪತಿ ಭಟ್ ಹಾಗೂ ಲಾಲಾಜಿ ಆರ್.ಮೆಂಡನ್ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ. ಕರಾವಳಿ ಪ್ರದೇಶದ ಎಲ್ಲ ಸಂಘ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಈ ಜನಪರ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಬೆಂಗಳೂರು-ಮಂಗಳೂರು ರೈಲನ್ನು ಕಾರವಾರಕ್ಕೆ ವಿಸ್ತರಿಸಲು 2009ರ ಜೂನ್ 30ರಂದು ನೈಋತ್ಯ ರೈಲ್ವೆ ಜನರಲ್ ಒಪ್ಪಿಗೆ ನೀಡಿದ್ದಲ್ಲದೇ ಆ. 9 ಅಥವಾ 10ರಂದು ಸೇವೆ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆಗಿನ ರೈಲ್ವೆ ಖಾತೆ ರಾಜ್ಯ ಸಚಿವ ಇ.ಅಹಮದ್ ಅವರ ಸಂಚಿನಿಂದಾಗಿ ಆ ರೈಲು ಮಂಗಳೂರಿನಿಂದ ಕಾರವಾರಕ್ಕೆ ಬರುವ ಬದಲು 2009ರ ಡಿ. 14ರಂದು ಕಣ್ಣೂರಿಗೆ ವಿಸ್ತರಣೆಗೊಂಡಿತು’ ಎಂದು ಕಿಡಿಕಾರಿದರು.

ಇತ್ತೀಚೆಗೆ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿ ಇನ್ನೂ ಆಘಾತಕಾರಿಯಾಗಿದೆ. ಕಳೆದ ಎರಡು ವರ್ಷದಿಂದ ನಿತ್ಯ ರೂ. 2 ಲಕ್ಷ ನಷ್ಟ ಮಾಡಿಕೊಂಡು ಆ ರೈಲನ್ನು ಕಣ್ಣೂರಿಗೆ ಓಡಿಸಲಾಗುತ್ತಿದೆ.ಈ ಬಗ್ಗೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದೇವೆ. ರೈಲಿನ ಪ್ರತಿ ಬೋಗಿಯಲ್ಲಿ 72 ಆಸನಗಳಿರುತ್ತವೆ. ಅಂತಹ 17 ಬೋಗಿಯನ್ನು ಖಾಲಿಯಾಗಿ ಕಣ್ಣೂರಿಗೆ ಓಡಿಸುವ ಬದಲು ಅದರಲ್ಲಿ 10 ಬೋಗಿಯನ್ನು ಕಾರವಾರಕ್ಕೆ ವಿಸ್ತರಿಸುವಂತೆ ಕೋರಿದ್ದವು. ಈ ಪ್ರಸ್ತಾಪ ರೈಲ್ವೆ ಮಂಡಳಿ ಮುಂದಿದೆ. ಆದರೆ ಐಆರ್‌ಟಿಟಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗದಿರುವುದರಿಂದ ಜನತೆ ಆಕ್ರೋಶ ವ್ಯಕ್ತಪಡಿಸುವುದು ಅನಿವಾರ್ಯ’ ಎಂದು ತಿಳಿಸಿದರು.

ನೀರಿನ ಕೊರತೆ- ಕಟ್ಟುಕತೆ: ‘ಕಾರವಾರದಲ್ಲಿ ನೀರಿನ ಕೊರತೆ ಇರುವುದರಿಂದ ರೈಲು ವಿಸ್ತರಣೆ ಸಾಧ್ಯವಿಲ್ಲ ಎಂದು ಕೊಂಕಣ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರದಿಯಲ್ಲಿ ನಿಜಾಂಶವಿಲ್ಲ. ಅದೇ ಕಾರವಾರ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಆಗಮಿಸುವ ರೈಲಿಗೆ ನೀರು ಪೂರೈಕೆ ಸಾಧ್ಯವಾಗುವುದು ಹೇಗೆ?’ ಎಂದು ಅವರು ಪ್ರಶ್ನಿಸಿದರು.
ರೈಲ್ವೆ ಯಾತ್ರಿ ಸಂಘ ಉಪಾಧ್ಯಕ್ಷೆ ಲಿಡ್ವಿನ್ ಪಿಂಟೊ, ಕೊಶಾಧಿಕಾರಿ ಕೆ.ರಾಮಚಂದ್ರ ಆಚಾರ್ಯ, ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್, ಎ.ಪಿ.ಕೊಡಂಚ, ಎಸ್.ಎಸ್.ತೋನ್ಸೆ ಸುದ್ದಿಗೋಷ್ಠಿಯಲ್ಲಿದ್ದರು.

‘ನಿಷ್ಕ್ರಿಯ ಸಂಸದರು!’
‘ಪ್ರಸಿದ್ಧ ಯಾತ್ರಾಸ್ಥಳವಾದ ಉಡುಪಿಯಲ್ಲಿ ಎರ್ನಾಕುಳಂನಿಂದ ಪುಣೆಗೆ ಸಾಗುವ ‘ಪೂರ್ಣ’ ಎಕ್ಸ್‌ಪ್ರೆಸ್, ಅಮೃತಸರ-ಡೆಹ್ರಾಡೂನ್ ರೈಲು ಹಾಗೂ ಮುಂಬೈ-ಮಂಗಳೂರು ಸೂಪರ್‌ಫಾಸ್ಟ್ ರೈಲಿಗೆ ನಿಲುಗಡೆ ಇಲ್ಲ. ಈ ನಿಟ್ಟಿನಲ್ಲೂ ಉಡುಪಿ ಜನರ ಬೇಡಿಕೆ ಕಡೆಗಣಿಸಲಾಗಿದೆ. ಈ ಭಾಗದ ಸಂಸದರಾದ ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಅನಂತ ಕುಮಾರ್ ಹೆಗಡೆ, ಬಿ.ರಾಘವೇಂದ್ರ ಅವರು ಸೂಕ್ತ ರೀತಿಯಲ್ಲಿ ಧ್ವನಿ ಎತ್ತುತ್ತಿಲ್ಲ’ ಎಂದು ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.