ADVERTISEMENT

ಉಡುಪಿ: ಸಡಗರದ ಷಷ್ಠಿ ಮಹೋತ್ಸವ

ಕೃಷ್ಣಮಠದ ಸುಬ್ರಹ್ಮಣ್ಯ ಗುಡಿಯಲ್ಲಿ ಮಡೆಸ್ನಾನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:19 IST
Last Updated 19 ಡಿಸೆಂಬರ್ 2012, 11:19 IST

ಉಡುಪಿ: ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಬಳಿ ಭಕ್ತರು ಮಂಗಳವಾರ ಮಡೆ ಸ್ನಾನ ಮಾಡಿದರು.

ಷಷ್ಠಿಯ ಅಂಗವಾಗಿ ಸುಬ್ರಹ್ಮಣ್ಯ ಗುಡಿಯಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಅನ್ನ ಸಂತರ್ಪಣೆು ನಂತರ ಐವರು ಮಹಿಳೆಯರೂ ಸೇರಿ ಒಟ್ಟು ಹತ್ತು ಮಂದಿ ಮಡೆಸ್ನಾನ ಮಾಡಿದರು. ಎಂಜಲು ಎಲೆಯ ಮೇಲೆ ದೇವಸ್ಥಾನವನ್ನು ಒಂದು ಸುತ್ತು ಹಾಕಿದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.

ದೇವಸ್ಥಾನದ ಎದುರು ಕೇವಲ ಬ್ರಾಹ್ಮಣರಿಗೆ ಮಾತ್ರ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಮಡೆ ಸ್ನಾನ ಮಾಡಿದವರು ಸಹ ಬ್ರಾಹ್ಮಣರೇ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದರು.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಬಾರಿ ಮಡೆಸ್ನಾನ ನಿಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅಲ್ಲದೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ಹಲವು ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮಡೆ ಸ್ನಾನ ಮಾಡಲು ಅವಕಾಶ ನೀಡಲಾಗುತ್ತಿದೆ ಎಂಬ ಮಾಹಿತಿ ಬಂತು. ಆದ್ದರಿಂದ ಇಲ್ಲಿಯೂ ಮಡೆಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಯಿತು ಎಂದು ದೇವಸ್ಥಾನದ ಪ್ರಮುಖರು ತಿಳಿಸಿದರು.

ಬ್ರಾಹ್ಮಣರು ಊಟ ಮಾಡಿದ ಎಲೆಯ ಮೇಲೆ ಅನ್ಯ ಜಾತಿಯವರು ಮಾತ್ರ ಉರುಳು ಸೇವೆ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನಮ್ಮಲ್ಲಿ ಮಡೆಸ್ನಾನ ಮಾಡಿದವರೆಲ್ಲರೂ ಬ್ರಾಹ್ಮಣರೇ. ಮಡೆಸ್ನಾನದಲ್ಲಿ ಜಾತಿಯ ವಿಷಯ ಬರುವುದಿಲ್ಲ ಎಂದು ಅವರು ಹೇಳಿದರು.

ಮಡೆ ಸ್ನಾನಕ್ಕೆ ವಿರೋಧ ವ್ಯಕ್ತವಾಗಬಹುದು ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಉಡುಪಿಯ ಮುಚ್ಚಿಲಕೋಡು, ತಾಂಗೋಡು, ಮಾಂಗೋಡು, ಅರಿತೋಡು, ಸಗ್ರಿ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಬಡಗುಪೇಟೆಯ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿಯ ಅಂಗವಾಗಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.

ಪೆರ್ಡೂರು ಬಳಿಯ ಕಲ್ಲಂಗಳದಲ್ಲೂ ಸಂಭ್ರಮದ ಷಷ್ಠಿ ಮಹೋತ್ಸವ ಜರುಗಿತು. ಸಾವಿರಾರು ಭಕ್ತರು ನಾಗನಿಗೆ ಪೂಜೆ ಸಲ್ಲಿಸಿದರು.

ಕುಂದಾಪುರ: ಷಷ್ಠಿ ಮಹೋತ್ಸವ
ಕುಂದಾಪುರ: ತಾಲ್ಲೂಕಿನ ಕಾಳಾವರ ಹಾಗೂ ಉಳ್ಳೂರಿನ ಕಾಳಿಂಗ ಹಾಗೂ ಕಾರ್ತಿಕೇಯ ಸುಬ್ರಮಣ್ಯ ದೇವಸ್ಥಾನಗಳಲ್ಲಿ ಮಂಗಳವಾರ ಷಷ್ಠಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ತಾಲ್ಲೂಕಿನ ವಿವಿಧೆಡೆಯ ಭಕ್ತಾಧಿಗಳು ಮುಂಜಾನೆಯಿಂದಲೇ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಷಷ್ಠಿ ಮಹೋತ್ಸವ ಅಂಗವಾಗಿ ಪೊಲೀಸರು ಬಂದೋಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.