ADVERTISEMENT

ಉದ್ಯೋಗ ಖಾತರಿ ಪರಿಣಾಮಕಾರಿಯಾಗಲಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 9:28 IST
Last Updated 20 ಡಿಸೆಂಬರ್ 2013, 9:28 IST

ಉಡುಪಿ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಲು ಜನಪ್ರತಿನಿಧಿಗಳು, ಗ್ರಾಮ ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಶ್ರಮಿಸಬೇಕು ಎಂದು ಒಂಬುಡ್ಸ್‌ಮನ್‌ ಶೀನಶೆಟ್ಟಿ ಹೇಳಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿ­ಸಿದ್ದ ಉದ್ಯೋಗ ಖಾತರಿ ಯೋಜನೆಯ ಮಾಹಿತಿ, ಶಿಕ್ಷಣ, ಸಂಹವನ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆ ವರದಾನವಾಗಿದೆ. ಉದ್ಯೋಗ ಚೀಟಿ ಪಡೆದಿರುವ ಪ್ರತಿ­ಯೊ­ಬ್ಬರೂ ವಾರ್ಷಿಕ 17,400 ರೂಪಾಯಿ ಆದಾಯ ಗಳಿಸುವಂತಾ­ಗಬೇಕು. ಮಾರ್ಗಸೂಚಿಯ ಅನ್ವಯ ಕೆಲಸ ಮಾಡಿದರೆ ಮೂರು ವರ್ಷ­ಗಳಲ್ಲಿ ಆಗದಷ್ಟು ಕೆಲಸ ಮುಂದಿನ ಐದು ತಿಂಗಳಲ್ಲಿ ಆಗಲಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿಗೆ ಪರಮಾಧಿ­ಕಾರವಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ಸಿಗುವಂತೆ ಮಾಡುವ ಹೊಣೆಯೂ ಇದೆ. ಗ್ರಾಮದಲ್ಲಿ ಆಸ್ತಿ ಸೃಷ್ಟಿಸಿ, ನೆಲ, ಜಲ ಸಂರಕ್ಷಣೆ ಕೆಲಸವನ್ನು ಮಾಡಿ. ಸಾಮಗ್ರಿ ಆಧಾರಿತ ಕೆಲಸವನ್ನು ಕಡಿಮೆ ಮಾಡಿ ಕೂಲಿ ಆಧಾರಿತ ಕಾಮಗಾರಿಗೆ ಆದ್ಯತೆ ನೀಡಿ ಎಂದು ಕಿವಿ ಮಾತು ಹೇಳಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜು­ನಾ­ಥಯ್ಯ ಅತ್ಯುತ್ತಮವಾಗಿ ಕೆಲಸ ಮಾಡಿರುವ ಪಂಚಾಯಿತಿಗಳನ್ನು ಸಭೆಗೆ ಪರಿಚಯಿಸಿದರು. ಎಲ್ಲ ಅರ್ಹರಿಗೂ ಉದ್ಯೋಗ ಚೀಟಿ ನೀಡಲು ಶ್ರಮಿಸುವುದಾಗಿ ಪಿಡಿಓ, ಕಾರ್ಯದರ್ಶಿಗಳು ಪ್ರತಿಜ್ಞೆ ಮಾಡಿ­ದರು. ಕೃಷ್ಣಮೂಲ್ಯ,  ಉಮಾನಾಥ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.