ADVERTISEMENT

ಕಂದಾಯ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 6:20 IST
Last Updated 11 ಅಕ್ಟೋಬರ್ 2012, 6:20 IST

ಉಡುಪಿ: `ರಾಜ್ಯ ಸರ್ಕಾರ ಕಂದಾಯ ಕಾಯ್ದೆಯ 94ಸಿ ಕಲಂಗೆ ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಿದ ಕಾರಣ ಅದಕ್ಕೆ ಒಪ್ಪಿಗೆ ನೀಡಲು ರಾಜ್ಯಪಾಲರು ನಿರಾಕರಿಸಿದ್ದಾರೆ~ ಎಂದು ಕಾರ್ಕಳ ಶಾಸಕ ಕೆ. ಗೋಪಾಲ ಭಂಡಾರಿ ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಕಾಪು ಬ್ಲಾಕ್ ಉತ್ತರ ವಲಯ ಕಾಂಗ್ರೆಸ್ ಹಿರಿಯಡ್ಕದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

`ತಿದ್ದುಪಡಿಯು ಅವೈಜ್ಞಾನಿಕವಾಗಿದೆ. ಆದ್ದರಿಂದ ಕೇಂದ್ರದಲ್ಲಿ ಕಾನೂನು ಸಚಿವರಾಗಿ ಅನುಭವ ಹೊಂದಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಒಪ್ಪಿಕೆ ನೀಡಿಲ್ಲ. ಈ ತಿದ್ದುಪಡಿಯಿಂದ ಬಡವರಿಗೆ ಅನುಕೂಲವಾಗುವುದಿಲ್ಲ. ಅಕ್ರಮ- ಸಕ್ರಮ ಸಾಧ್ಯವಾಗದು~ ಎಂದು ಅವರು ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿ ಎ.ಎಂ. ಗಫೂರ್ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯ ತನ್ನದೆಂದು ಹೇಳಿಕೊಳ್ಳುತ್ತಿದೆ ಎಂದು ಆರೋಪ ಮಾಡಿದರು.ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದ ಮಾಜಿ ಸಚಿವ ವಸಂತ್ ವಿ. ಸಾಲ್ಯಾನ್, ಎಲ್ಲರಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ಆಡಳಿತ ಇರುವ ರಾಜ್ಯಗಳಲ್ಲಿ ಮೂರು ಸಬ್ಸಿಡಿ ಸಿಲಿಂಡರ್‌ಗಳನ್ನು ಹೆಚ್ಚುವರಿ ನೀಡುವ ಘೋಷಣೆ ಮಾಡಲಾಗಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಏಕೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಶ್ನೆ ಮಾಡುತ್ತಿಲ್ಲ ಎಂದು ಉಡುಪಿ- ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಉಪಾಧ್ಯಕ್ಷ ಅಮೃತ್ ಶೆಣೈ ಪ್ರಶ್ನಿಸಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್, ಕಾರ್ಯದರ್ಶಿ ಹರೀಶ್ ಕಿಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಜೀಜ್ ಹೆಜಮಾಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗಿರೀಶ್ ಕುಮಾರ್ ಉದ್ಯಾವರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.