ADVERTISEMENT

`ಕಂಬಳ ಗ್ರಾಮೀಣ ಸಂಸ್ಕೃತಿಯ ಹೆಗ್ಗುರುತು'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:25 IST
Last Updated 27 ಡಿಸೆಂಬರ್ 2012, 7:25 IST

ಗಂಗಾನಾಡು (ಬೈಂದೂರು): ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಮನೋಲ್ಲಾಸಕ್ಕಾಗಿ ನಡೆಸುವ ಕಂಬಳ ಅಲ್ಲಿನ ಸಂಸ್ಕೃತಿಯ ಹೆಗ್ಗುರುತು. ಅದು ನಶಿಸದಂತೆ ಕಾಪಾಡುವ ಹೊಣೆ ಎಲ್ಲರದು ಎಂದು ಗಂಗಾನಾಡು ಒಣಕೊಡ್ಲು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಎ.ಅಣ್ಣಪ್ಪ ಶೆಟ್ಟಿ ಹೇಳಿದರು.

ರೈತಸಂಘದ ಆಶ್ರಯದಲ್ಲಿ ಗಂಗಾನಾಡು ಒಣಕೊಡ್ಲುವಿನಲ್ಲಿ ಈಚೆಗೆ ಏರ್ಪಡಿಸಿದ್ದ ಕಂಬಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೈತಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ ಕಳೆದ ವರ್ಷ ಇಲ್ಲಿನ 100ನೇ ವರ್ಷದ ಕಂಬಳವನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಉದ್ಘಾಟಿಸಿರುವುದನ್ನು ಸ್ಮರಿಸಿಕೊಂಡರು. ಕಂಬಳ ಮಣ್ಣಿನ ಮಕ್ಕಳಾದ ರೈತರ ಮೆಚ್ಚಿನ ಕ್ರೀಡೆ. ಅದು ಗ್ರಾಮೀಣ ಕಲೆಯೂ ಹೌದು. ಅದನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಉದ್ಯಮಿ ಸುಬ್ರಹ್ಮಣ್ಯ ಪೂಜಾರಿ, ರೈತಸಂಘದ ಕಾರ್ಯಕರ್ತರಾದ ಫಯಾಜ್ ಆಲಿ, ಕಂಬಳ ಗದ್ದೆಯ ಮಾಲಕರಾದ ಕುಪ್ಪಯ್ಯ ಮರಾಠಿ, ರಾಜು ಮರಾಠಿ ಇದ್ದರು. ಯಡ್ತರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ ಸ್ವಾಗತಿಸಿದರು. ಸುಮಾರು 75 ಜೊತೆ ಕೋಣಗಳು ಪಾಲ್ಗೊಂಡಿದ್ದವು. ವಿಜೇತ ಕೋಣಗಳಿಗೆ ನಗದು ಬಹುಮಾನ ವಿತರಿಸಲಾಯಿತು.

ಫಲಿತಾಂಶ: ಜಿಲ್ಲಾಮಟ್ಟ-ಹಲಗೆ ವಿಭಾಗ 1. ಭಾಸ್ಕರ ಪೂಜಾರಿ ಬಾರ್ಕೂರು. 2. ಶುಕ್ರ ಪೂಜಾರಿ ಕಿರಿಮಂಜೇಶ್ವರ 3. ಸೋಮಯ್ಯ ಗೊಂಡ ಭಟ್ಕಳ ; ಹಗ್ಗ ವಿಭಾಗ 1. ಸ್ವಂಪ ಕುಮಾರ ಕುಂದಬಾರಂದಾಡಿ 2. ಶೇಖರ ಪೂಜಾರಿ ಉಳ್ಳೂರು 3. ಭದ್ರ ದೇವಾಡಿಗ ಮೊಗೇರಿ

ಬೈಂದೂರು ವಲಯ ಮಟ್ಟ-ಹಲಗೆ ವಿಭಾಗ 1. ಲಕ್ಕು ಮರಾಠಿ ಬೆಳಗೊಡ್ಲು 2. ವೆಂಕಟ ಪೂಜಾರಿ ಕಳವಾಡಿ 3. ಕುಪ್ಪ ಮರಾಠಿ ಹೊಸೂರು; ಹಗ್ಗ ವಿಭಾಗ 1. ವೆಂಕಟ ಪೂಜಾರಿ ಕಳವಾಡಿ 2.ಮರ್ಲಯ್ಯ ಪೂಜಾರಿ ಗೋಳಿಹೊಳೆ 3. ಸುಬ್ಬಯ್ಯ ಮರಾಠಿ ಗಂಗಾನಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.