ADVERTISEMENT

ಕಟಪಾಡಿ: ಭೀಕರ ರಸ್ತೆ ಅಫಘಾತ, ಚಾಲಕ ದಾರುಣ ಸಾವು

ನಿಂತಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ

​ಪ್ರಜಾವಾಣಿ ವಾರ್ತೆ
Published 1 ಮೇ 2019, 15:36 IST
Last Updated 1 ಮೇ 2019, 15:36 IST
ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ಸಮೀಪದಲ್ಲಿ ಲಾರಿಗೆ ಹಿಂದಿನಿಂದ ಡಿಕ್ಕಿಯಾದ ಗ್ಯಾಸ್ ಟ್ಯಾಂಕರ್.
ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ಸಮೀಪದಲ್ಲಿ ಲಾರಿಗೆ ಹಿಂದಿನಿಂದ ಡಿಕ್ಕಿಯಾದ ಗ್ಯಾಸ್ ಟ್ಯಾಂಕರ್.   

ಶಿರ್ವ: ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ಸಮೀಪ ಲಾರಿಗೆ ಹಿಂದಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಚಾಲಕ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಕಟಪಾಡಿ ಜಂಕ್ಷನ್‌ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಇಟ್ಟಿದ್ದರಿಂದ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಲಾರಿ ವೇಗ ಕಡಿಮೆಗೊಳಿಸುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ತಮಿಳುನಾಡು ಸೇಲಂ ನಿವಾಸಿ ಟ್ಯಾಂಕ್‌ ಚಾಲಕ ಸೆಲ್ವ ಕುಮಾರ್ (40) ಸಾವನ್ನಪ್ಪಿದ್ದಾರೆ.

ಲಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಲಾರಿ ಚಾಲಕ ಟ್ಯಾಂಕರ್‌ನ ಅವಶೇಷಗಳಡಿ ಸಿಲುಕಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಸೆಲ್ವ ಕುಮಾರ್ ಅವರನ್ನು ಹೊರಗೆ ತೆಗೆಯಲು ಸಾರ್ವಜನಿಕರು ಹರಸಾಹಸ ಪಡಬೇಕಾಯಿತು. ಪೊಲೀಸರು ಸೇರಿದಂತೆ
ಸಾರ್ವಜನಿಕರು ಚಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಪತ್ನಿ, ಮೂವರು ಮಕ್ಕಳಿದ್ದಾರೆ.

ADVERTISEMENT

ಚಾಲಕ ಸೆಲ್ವಕುಮಾರ್ ಉಡುಪಿಯಿಂದ ಸುರತ್ಕಲ್‌ಗೆ ಟ್ಯಾಂಕರ್ ಚಲಾಯಿಸುತ್ತಿದ್ದ. ಈ ವೇಳೆ ಪೊಲಿಪುವಿನಲ್ಲಿ ಬ್ಯಾರಿಕೇಡ್‌ ಮೇಲೆ ಟ್ಯಾಂಕರ್ ಚಲಾಯಿಸಿದ್ದು, ಪೊಲೀಸರು ಬೆನ್ನತ್ತುವ ಭೀತಿಯಲ್ಲಿ ಕಾಪು ವಿದ್ಯಾನಿಕೇತನ ಶಾಲೆ ಬಳಿ ಯೂ ಟರ್ಟ್‌ ಪಡೆದುಕೊಂಡು ಉಡುಪಿ ಕಡೆಗೆ ಹೋಗಿದ್ದಾನೆ. ವೇಗದಿಂದ ಬರುತ್ತಿದ್ದಾಗ ಕಟಪಾಡಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದ ಕಾರಣದಿಂದ ವೇಗ ಕಡಿಮೆ ಮಾಡಿದ್ದರಿಂದ ಲಾರಿಗೆ ಡಿಕ್ಕಿ ಹೊಡೆದಿತ್ತು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.