ADVERTISEMENT

ಕರಾವಳಿ ನಿಯಂತ್ರಣ ವಲಯ:ಗಣಿಗಾರಿಕೆಗೆ ತಾತ್ಕಾಲಿಕ ಪರವಾನಗಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 9:00 IST
Last Updated 19 ಜೂನ್ 2012, 9:00 IST
ಕರಾವಳಿ ನಿಯಂತ್ರಣ ವಲಯ:ಗಣಿಗಾರಿಕೆಗೆ ತಾತ್ಕಾಲಿಕ ಪರವಾನಗಿ
ಕರಾವಳಿ ನಿಯಂತ್ರಣ ವಲಯ:ಗಣಿಗಾರಿಕೆಗೆ ತಾತ್ಕಾಲಿಕ ಪರವಾನಗಿ   

ಉಡುಪಿ: ಕರಾವಳಿ ನಿಯಂತ್ರಣ ವಲಯದ ನದಿ ಪಾತ್ರದಲ್ಲಿ ಸಾಮಾನ್ಯ ಮರಳು ಗಣಿಗಾರಿಕೆ ಮಾಡಲು ಜೂನ್ 2012 ರಿಂದ ಜಾರಿಗೆ ಬರುವಂತೆ ತಾತ್ಕಾಲಿಕ ಪರವಾನಗಿ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಉಡುಪಿ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕರಾವಳಿ ನಿಯಂತ್ರಣ ವಲಯ ಮರಳುಗಾರಿಕೆ ಸಮಿತಿ ಸಭೆಯ ನಂತರ ಅವರು ಈ ಆದೇಶ ನೀಡಿದ್ದಾರೆ. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎನ್.ಐ.ಟಿ.ಕೆ ಸುರತ್ಕಲ್‌ನ ಪ್ರೊ. ಎಸ್. ಜಿ. ಮಯ್ಯ  ಅವರು ಶಿಫಾರಸು ಮಾಡಿರುವ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಗಣಿಗಾರಿಕೆ ಮಾಡಲು ತಾತ್ಕಾಲಿಕ ಪರವಾನಗಿ ನೀಡಲಾಗುವುದು~ ಎಂದರು.

ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೊಸ ಮರಳು ನೀತಿ ಈಗಾಗಲೇ ಜಾರಿಯಾಗಿದ್ದು ಕರಾವಳಿ ಜಿಲ್ಲೆಗಳಿಗೂ ಹೊಸ ಮರಳು ನೀತಿಯನ್ನು ತುರ್ತಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅವರು ತಿಳಿಸಿದರು.

ಮಯ್ಯ ಅವರು ಶಿಫಾರಸು ಮಾಡಿರುವ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡಲು ಜುಲೈ ಅಂತ್ಯದೊಳಗಾಗಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆದು ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಮಾಡತಕ್ಕದು, ಯಾವುದೇ ಅನಧಿಕೃತ ಗಣಿಗಾರಿಕೆ, ಸಾಗಣೆ ಹಾಗೂ ದಾಸ್ತಾನು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಜಿಲ್ಲಾ ಮರಳು ಉಸ್ತುವಾರಿ- ಗಣಿಗಾರಿಕೆ ಸಮಿತಿಯ ಎಲ್ಲಾ ಸದಸ್ಯರಿಗೂ ಸೂಚನೆ ನೀಡಲಾಗಿದೆ ಎಂದು ರೇಜು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿ ನಿರ್ವಹಿಸುತ್ತಿರುವವರು ಅಧಿಕೃತ ಪರವಾನಗಿ ಹೊಂದಿರುವ ವ್ಯಕ್ತಿಗಳಿಂದ ಮಾತ್ರ ಉಪಖನಿಜ (ಕಟ್ಟಡ ಕಲ್ಲು, ಜಲ್ಲಿ, ಮರಳು ಇತ್ಯಾದಿ) ಪಡೆದುಕೊಳ್ಳತಕ್ಕದ್ದು. ಯಾವುದೇ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಉಪ ಖನಿಜವನ್ನು ಪಡೆದ ಬಗ್ಗೆ ಪರವಾನಗಿಯನ್ನು ಹಾಜರುಪಡಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಶಾಸಕ ಕೆ. ರಘುಪತಿ ಭಟ್ `ಈ ಹಿಂದೆ ಮರಳುಗಾರಿಕೆ ಮಾಡು              ತ್ತಿದ್ದವರಲ್ಲದೇ ಕೆಲವು ನಿರುದ್ಯೋಗಿ ಯುವಕರೂ ಸಹ ಮರಳುಗಾರಿಕೆಗೆ ಮುಂದಾಗಿದ್ದಾರೆ. ಅವರಿಗೂ ಸಹ  ಮುಂದಿನ  ದಿನಗಳಲ್ಲಿ ಅವಕಾಶ  ಮಾಡಿ  ಕೊಡಬೇಕೆಂದು~ ಹೇಳಿದರು.

`ಗಣಿಗಾರಿಕೆಗೆ ಶಿಫಾರಸು ಮಾಡಿರುವ ಪ್ರದೇಶ ಗಳಲ್ಲಿ ಸಾಮಾನ್ಯ ಮರಳು ತೆಗೆಯುವುದರಿಂದ ನದಿಯ ನೀರು ಸರಾಗವಾಗಿ ಹರಿದು ಸಮುದ್ರ ಸೇರುತ್ತದೆ. ಇದರಿಂದ ನದಿಯ ಪ್ರವಾಹದ ಪ್ರಮಾಣವನ್ನು ಮಿತಗೊಳಿಸಬಹುದು. ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಮರಳನ್ನು ತೆಗೆಯಬೇಕೆಂದು~ ಮಯ್ಯ ಹೇಳಿದರು.

ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಟಿ. ಬಾಲಚಂದ್ರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಂ.ಮೃತ್ಯುಂಜಯ ಹಾಗೂ ಜಿಲ್ಲಾ ಹೊಯಿಗೆ ದೋಣಿ ಕಾರ್ಮಿಕ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.