ADVERTISEMENT

ಕಾರಂತ ಥೀಂ ಪಾರ್ಕ್‌ಗೆ ಬಿಗಿ ಬಂದೋಬಸ್ತ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 9:45 IST
Last Updated 11 ಅಕ್ಟೋಬರ್ 2017, 9:45 IST

ಕೋಟ (ಬ್ರಹ್ಮಾವರ): ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ಪ್ರಯುಕ್ತ ಮಂಗಳವಾರ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಮಂಗಳವಾರ ಮುಂಜಾನೆಯಿಂದಲೇ ಸುಮಾರು 160ಕ್ಕೂ ಅಧಿಕ ಪೊಲೀಸರು ಕಾರಂತ ಥೀಂ ಪಾರ್ಕ್ ಬಂದೋಬಸ್ತಿನಲ್ಲಿ ತೊಡಗಿದ್ದರು. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ. ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್‌ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೋಟತಟ್ಟು ಪಂಚಾಯಿತಿ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ನೀಡುವ 13ನೇ ವರ್ಷದ ಪ್ರಶಸ್ತಿಗೆ ಬಹುಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದ ಬಳಿಕ, ಅವರು ಸಾರ್ವಜನಿಕ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಿ ಹಿಂದೂಪರ ಸಂಘಟನೆಗಳು, ಬಿಜೆಪಿಯವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಕುರಿತು ಹೇಳಿಕೆ ನೀಡಿದ್ದರು. ಅಲ್ಲದೇ ರೈ ಅವರಿಗೆ ಕಾರಂತರ ಹೆಸರಿನ ಪ್ರಶಸ್ತಿ ನೀಡದಂತೆ ಒತ್ತಾಯಿಸಿತ್ತು.

ಆದರೆ ಪ್ರಶಸ್ತಿ ಆಯ್ಕೆ ಸಮಿತಿಯು ನಟ ನಿರ್ದೇಶಕ ಪ್ರಕಾಶ್ ರೈ ಅವರನ್ನು ತಿಂಗಳ ಹಿಂದೆಯೇ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ವಿಚಾರ ಪ್ರತಿಷ್ಠಾನ ಮತ್ತು ಕೋಟತಟ್ಟು ಪಂಚಾಯಿತಿ ದೃಢವಾಗಿರುವುದಾಗಿಯೂ ಮತ್ತು ನಿರ್ಧಾರಿತ ದಿನದಂದೇ ಪ್ರಶಸ್ತಿ ನೀಡುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲಿ ಪರ ಮತ್ತು ವಿರೋಧದ ಕಾವು ಏರಿತ್ತು.

ADVERTISEMENT

ಇನ್ನೊಂದೆಡೆ ಅಖಿಲ ಕರ್ನಾಟಕ ನಾಥಪಂತ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ಡಾ.ಕೇಶವ ಕೋಟೇಶ್ವರ ನೇತೃತ್ವದಲ್ಲಿ ಜೋಗಿ ಸಮುದಾಯದ ಪ್ರಮುಖರು ಒಟ್ಟಾಗಿ ಕೋಟ ಅಮೃತೇಶ್ವರೀ ದೇವಸ್ಥಾನ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಗೆ ಸಿದ್ಧರಾಗಿದ್ದರು. ಉಳಿದಂತೆ ವಿವಿಧ ಸಂಘಟನೆಯವರು ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಭಟನೆಗೆ ತಯಾರಿಸಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.