ಕಾರ್ಕಳ: ಇಲ್ಲಿನ ಬಸ್ ನಿಲ್ದಾಣ ಸ್ಥಳಾಂತರಿಸಿದ್ದು ತೀರಾ ಅವೈಜ್ಞಾನಿಕವಾಗಿದ್ದು ಇದಕ್ಕೆ ಸೂಕ್ತ ಪರಿಹಾರ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು ತಹಶೀಲ್ದಾರರ ಮೂಲಕ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
`ಬಸ್‌ನಿಲ್ದಾಣ ಸ್ಥಳಾಂತರದಿಂದ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಅನಾನುಕೂಲವಾಗಿದೆ. ಈವರೆಗಿದ್ದ ಬಸ್‌ನಿಲ್ದಾಣ ಪಟ್ಟಣದ ಮಧ್ಯ ಭಾಗದಲ್ಲಿದ್ದು ಬಸ್ ನಿಲ್ದಾಣದಿಂದ ಪಟ್ಟಣದ ಎಲ್ಲ ಕಡೆ ತೆರಳಲು ಅನುಕೂಲವಾಗಿತ್ತು.
ಈ ಬಸ್‌ನಿಲ್ದಾಣವನ್ನು ವಿಸ್ತರಿಸುವ ಸಲುವಾಗಿಯೇ ಗ್ರಾಮ ಚಾವಡಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯನ್ನು ತೆರವು ಗೊಳಿಸಲಾಗಿತ್ತು. ಜೊತೆಗೆ ಅಂಚೆ ಇಲಾಖೆಯು ಪುರಸಭೆಗೆ ಭೂಮಿಯನ್ನೂ ಬಿಟ್ಟುಕೊಟ್ಟಿತ್ತು. ಇಷ್ಟೆಲ್ಲ ನಡೆಸಿದ ಬಳಿಕ ಬಸ್‌ನಿಲ್ದಾಣವನ್ನು ಸ್ಥಳಾಂತರಿಸಿದ್ದಾದರೂ ಏಕೆ?~ ಎಂದು ಸಂಘಟನೆಗಳು ಪ್ರಶ್ನಿಸಿವೆ.
`ಹಿಂದಿನ ಬಸ್‌ನಿಲ್ದಾಣವನ್ನೇ ಮುಂದುವರಿಸಬೇಕು. ಇದು ಅಸಾಧ್ಯ ವಾದರೆ ಸೂಕ್ತಪರಿಹಾರ ಕಂಡು ಕೊಳ್ಳಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಸಮಲೋಚನೆ ನಡೆಸಿ ಸರ್ವಸಮ್ಮತ ವ್ಯವಸ್ಥೆ ಮಾಡಬೇಕು~ ಎಂದು ಸಂಘಟನೆಗಳು ವಿನಂತಿಸಿವೆ.
`ಬದಲಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ 10 ದಿನಗಳ ಕಾಲಾವಕಾಶ ಕೇಳಿದ್ದ ತಾವು 23 ದಿನ ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ಜನರಿಗೆ ಜಿಲ್ಲಾಡಳಿತ ಬಗ್ಗೆ ವಿಶ್ವಾಸ ಕಳೆದು ಹೋಗಿದೆ. ತಕ್ಷಣ ಕ್ರಮಕೈಗೊಳ್ಳದಿದ್ದರೆ ಪ್ರತಿಭಟನೆ ಅನಿವಾರ್ಯ~ ಎಂದು ಸಂಘ ಸಂಸ್ಥೆಗಳು ಎಚ್ಚರಿಸಿವೆ.
`ಕಾರ್ಕಳ ಉಳಿಸಿ ಆಂದೋಲನ ಸಮಿತಿ~ ಎಂದಿರುವ ಮನವಿ ಪತ್ರಕ್ಕೆ ನಾಗರಿಕ ಸೇವಾ ಸಮಿತಿ, ಪುರಸಭಾ ಮಾಜಿ ಅಧ್ಯಕ್ಷ, ಪದಾಧಿಕಾರಿಗಳು, ರೋಟರ‌್ಯಕ್ಟ್ ಕ್ಲಬ್‌ನ ಪದಾಧಿಕಾರಿಗಳು, ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬಸ್ ಏಜೆಂಟರ ಬಳಗದ ಪದಾಧಿಕಾರಿಗಳು ಸಹಿ ಹಾಕಿದ್ದಾರೆ.
`ಚುನಾವಣಾ ತುರ್ತುಕಾರ್ಯದ ನಿಮಿತ್ತ ಮಾ.4ರವರೆಗೆ ಜಿಲ್ಲಾಧಿಕಾರಿಗೆ ಬಿಡುವು ಇರುವುದಿಲ್ಲ~ ಎಂದು ಮನವಿ ಸ್ವೀಕರಿಸಿದ ತಹಸೀಲ್ದಾರ್ ತಿಳಿಸಿದ್ದಾರೆ.
`ಉಪ ಚುನಾವಣೆ ನಂತರ ಕಾರ್ಕಳಕ್ಕೆ ಕರೆಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಸಾಧ್ಯ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.