ADVERTISEMENT

ಕೋಟ ಪಡುಕೆರೆ: ರಾಷ್ಟ್ರ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಕುಲಪತಿ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 8:35 IST
Last Updated 20 ಮಾರ್ಚ್ 2012, 8:35 IST

ಕೋಟ (ಬ್ರಹ್ಮಾವರ): `ಭಾರತದಲ್ಲಿ ಪ್ರತಿಭಾನ್ವಿತರಿದ್ದರೂ 112 ವರ್ಷಗಳಲ್ಲಿ ಕೇವಲ ಮೂರು ನೊಬಲ್ ಪ್ರಶಸ್ತಿ ಬಂದಿದೆ. ಹೆಚ್ಚಿನ ಅವಿದ್ಯಾವಂತರು ಮತ್ತು ಗುಣಾತ್ಮಕ ಶಿಕ್ಷಣದ ಕೊರತೆ ಇದಕ್ಕೆ ಕಾರಣ. ಮಕ್ಕಳಿಗೆ ಮೂಲಭೂತ ಸೌಕರ್ಯದೊಂದಿಗೆ ಗುಣಾತ್ಮಕ ಶಿಕ್ಷಣ ದೊರೆತಲ್ಲಿ ಮಾತ್ರ ನಿರುದ್ಯೋಗ ಸಮಸ್ಯೆಯನ್ನು ದೂರಮಾಡಬಹುದು~ ಎಂದು  ಮಂಗಳೂರು ವಿಶ್ವವಿದ್ಯಾಲಯ ಕುಲ ಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿ ದರು.

ಕೋಟ ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಕೋಶ, ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಮತ್ತು ಕೋಟ ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ 25 ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

`700ವರ್ಷಗಳ ಕಾಲ ಭಾರತ ವಿದೇಶಿಗರ ಆಡಳಿತಕ್ಕೊಳಪಟ್ಟ ಏಕೈಕ ದೇಶವಾಗಿತ್ತು. ಕೃಷಿ, ತಂತ್ರಜ್ಞಾನ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ನಿಧಾನಗತಿಯಲ್ಲಿ ಪ್ರಗತಿ ಕಾಣುತ್ತಿದೆ. 30ವರ್ಷಗಳ ನಂತರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿ ಭಾರತ ಇಡೀ ಜಗತ್ತಿನಲ್ಲಿಯೇ ನಂಬರ್-1 ದೇಶವಾಗಲಿದೆ~ ಎಂದರು.

`ಅಪೌಷ್ಠಿಕತೆ, ಅಶಿಕ್ಷಿತರ ಸಂಖ್ಯೆ ಹೆಚ್ಚಿದ್ದು, ಮರಣದ ಸಂಖ್ಯೆಯೂ ಹೆಚ್ಚುತ್ತಿದೆ. ಯುವಜನಾಂಗ ಸಂಘಟಿತರಾಗಿ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಈ ಎಲ್ಲಾ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕಾಗಿದೆ~ ಎಂದು ಹೇಳಿದರು.

ಕೋಟ ಪಡುಕೆರೆ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್, ಎನ್.ಎಸ್.ಎಸ್ ರಾಜ್ಯ ಸಂಪರ್ಕಾಧಿಕಾರಿ ಡಾ.ಕೆ.ಬಿ ಧನಂಜಯ, ಮಂಗಳೂರು ವಿ.ವಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಗಣನಾಥ ಎಕ್ಕಾರ್, ಕುವೆಂಪು ವಿಶ್ವವಿದ್ಯಾ ನಿಲಯದ ಬಸವರಾಜ್ ಕುಂದರ್, ಕಾಲೇಜಿನ ಎನ್.ಎಸ್.ಎಸ್ ಯೋಜನಾಧಿಕಾರಿ ಉದಯಕುಮಾರ್ ಶೆಟ್ಟಿ, ಜ್ಯೋತಿಪ್ರಿಯ, ಪ್ರೊ.ಯು .ನಾಗರಾಜ್ ಇದ್ದರು.

ಶಿಬಿರದಲ್ಲಿ ತಮಿಳುನಾಡು, ಕೇರಳ, ಆಂದ್ರಪ್ರದೇಶ, ಗುಜರಾತ್ ರಾಜ್ಯದ ವಿಶ್ವವಿದ್ಯಾನಿಲಯ ಮಟ್ಟದ ಸುಮಾರು 150 ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದಾರೆ.ಯೋಗ ಪ್ರಾಣಾಯಾಮ, ವಿವಿಧ ರಾಜ್ಯಗಳ ಪ್ರತಿನಿಧಿಗಳಿಂದ ವಿಚಾರ ಮಂಡನೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಕೃತಿ ಜಾಥಾ, ಆರೋಗ್ಯ ಅರಿವು ಜಾಥಾ, ಇತಿಹಾಸ ಪ್ರಸಿದ್ದ ಪ್ರದೇಶಗಳ ಸಂಚಾರ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.