ADVERTISEMENT

ಗ್ರಾಮ ಲೆಕ್ಕಿಗರ ವಜಾಕ್ಕೆ ಸೂಚನೆ

8 ಅಭ್ಯರ್ಥಿಗಳ ಅಂಕಪಟ್ಟಿ ನಕಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 6:56 IST
Last Updated 6 ಜುಲೈ 2013, 6:56 IST

ಉಡುಪಿ: `ಉಡುಪಿ ಜ್ಲ್ಲಿಲೆಯ ಮೂರೂ ತಾಲ್ಲೂಕುಗಳಲ್ಲಿ ಖಾಲಿ ಇದ್ದ ಗ್ರಾಮಲೆಕ್ಕಿಗ ಹುದ್ದೆಗೆ ನೇರ ನೇಮಕಾತಿಯಾಗಿದ್ದ 8 ಅಭ್ಯರ್ಥಿಗಳು ನಕಲಿ ಅಂಕ ಪಟ್ಟಿ ನೀಡಿರುವುದು ಪತ್ತೆಯಾಗಿದೆ. ಹುದ್ದೆಗೆ ನೇಮಕವಾದ ಅವರನ್ನು ವಜಾ ಮಾಡಲು ತೀರ್ಮಾನಿಸಲಾಗಿದೆ ಹಾಗೂ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ' ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಹೇಳಿದರು.

ಕುಂದಾಪುರದ ಕಟ್‌ಬೆಳ್ತೂರು ಗ್ರಾಮಲೆಕ್ಕಿಗ ಹುದ್ದೆಗೆ ನೇಮಕವಾದ ಬೆಂಗಳೂರು ವಿಜಯನಗರದ ಬಾಲಾಜಿ ನಗರ ಬೀದಿಯ ಎಂ.ವೆಂಕಟೇಶ್, ಆಲೂರು ಗ್ರಾಮ ಲೆಕ್ಕಿಗ ಹಾಸನ ಬೇಲೂರಿನ ಎಚ್. ಪಿ. ಬಸವರಾಜ್, ಜಪ್ತಿಯ ಗ್ರಾಮಲೆಕ್ಕಿಗ ಚಿಕ್ಕಬಳ್ಳಾಪುರ ಗೌರಿಬಿದನೂರಿನ ಕೆಂಕೆರೆಯ ಕೆ.ಎನ್ ಲಕ್ಷ್ಮಿನಾರಾಯಣ, ಮೊಳಹಳ್ಳಿಯ ಗ್ರಾಮಲೆಕ್ಕಿಗ ಚಿಕ್ಕಬಳ್ಳಾಪುರ ಗೌರಿಬಿದನೂರಿನ ಕಚಮಾಸೇನ ಹಳ್ಳಿಯ ಜಿ.ನಾಗರಾಜ, ಕಾರ್ಕಳ ಹೆರ್ಮುಂಡೆಯ ಗ್ರಾಮ ಲೆಕ್ಕಿಗ ಮಂಡ್ಯ ಪಾಂಡವಪುರದ ಪಿ.ರಾಘ ವೇಂದ್ರ, ಕಾಂತಾವರದ ಗ್ರಾಮ ಲೆಕ್ಕಿಗ ದಾವಣಗೆರೆ ಹೊನ್ನಾಳಿ ಮಾರಿಕೊಪ್ಪದ ಕೆ.ಕುಮಾರ, ಅಂಡಾರಿನ ಗ್ರಾಮಲೆಕ್ಕಿಗ ಹಾಸನ ಚನ್ನರಾಯಪಟ್ಟಣ ಶ್ರೀನಿವಾಸ ಪುರದ ಎಂ.ಕೆ.ಲೋಹಿತಾಶ್ವ ಹಾಗೂ ಉಡುಪಿ ಉದ್ಯಾ ವರದ ಗ್ರಾಮಲೆಕ್ಕಿಗ ಹುದ್ದೆಗೆ ನೇಮಕವಾದ ಮಂಗ ಳೂರು ಸೋಮೇಶ್ವರ ಉಚ್ಚಿಲದ ಎಸ್. ಜಯಲಕ್ಷ್ಮಿ ನಕಲಿ ಅಂಕಪಟ್ಟಿ ನೀಡಿದ್ದಾರೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕಂದಾಯ ಇಲಾಖೆಯ ಮುಖಾಂತರ ಜಿಲ್ಲೆಯ 24 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ 2008-09ರ ಅನ್ವಯ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಯನ್ವಯ ಆನ್‌ಲೈನ್ ಮೂಲಕ ಬಂದ ಅರ್ಜಿಗಳ ಪರಿಶೀಲನೆ ಮಾಡಿ 120 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಸರ್ಕಾರದ ಸೂಚನೆ ಯಂತೆ ಮೆರಿಟ್ ಮತ್ತು ಮೀಸಲಾತಿಯಂತೆ 24 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಆಯ್ಕೆ ಮಾಡಿ ನೇಮಕಾತಿಗೆ ಆದೇಶ ನೀಡಲಾಗಿತ್ತು. ನಂತರ ಅಂಕಪಟ್ಟಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಗೆ ಮರುಪರಿಶೀಲನೆಗೆ ಕಳುಹಿಸಿ ದಾಗ 8 ಅಭ್ಯರ್ಥಿಗಳ ದ್ವಿತೀಯ ಪಿಯುಸಿ ಅಂಕಪಟ್ಟಿ ನೈಜತೆ ಹೊಂದಿಲ್ಲ ಎಂದು ಇಲಾಖೆ ಜೂನ್ 26ರಂದು ವರದಿ ನೀಡಿದೆ ಎಂದರು.

2011 ಮತ್ತು 12ರಲ್ಲಿ ನೇಮಕ ವಾದ ಗ್ರಾಮ ಲೆಕ್ಕಿಗರ ಅಂಕಪಟ್ಟಿಗಳು ಹಾಗೂ ದಾಖಲೆಗಳನ್ನು ಮರುಪರಿಶೀಲಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ವಾರ್ತಾಧಿಕಾರಿ ಎಂ.ಜುಂಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.