ADVERTISEMENT

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 8:35 IST
Last Updated 3 ಅಕ್ಟೋಬರ್ 2012, 8:35 IST
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾರಿ
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜಾರಿ   

ಕಾಪು (ಪಡುಬಿದ್ರಿ): ಉಡುಪಿ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಪು, ಉಳಿಯರಗೋಳಿ ಗ್ರಾ.ಪಂ. ಪ್ರಥಮ ಬಾರಿಗೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರುವ ಮೂಲಕ ವಿಶೇಷ ಗಮನ ಸೆಳೆದಿದೆ.

ಉಡುಪಿ ನಗರ ಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂದ ಕೆಲವೇ ದಿನಗಳಲ್ಲಿ ಎರಡು ಗ್ರಾ.ಪಂ.ಗಳು ತನ್ನ ವ್ಯಾಪ್ತಿಯಲ್ಲಿ ಈ ಗಾಂಧಿ ಜಯಂತಿ ದಿನದಂದೇ ಈ ನಿಯಮವನ್ನು ಜಾರಿಗೆ ತಂದಿದೆ.

ಮಂಗಳವಾರ ಪ್ಲಾಸ್ಟಿಕ್ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಈ ಬಗ್ಗೆ ಕರಪತ್ರ ಬಿಡುಗಡೆಗೊಳಿಸಿ ಗ್ರಾಮದ ಜನರಲ್ಲಿ ವರ್ತಕರಲ್ಲಿ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕಾಪು ಪರಿಸರದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ `ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ~ ಎಂಬ ಘೋಷಣೆಯಡಿ ಜನಜಾಗೃತಿ ಮೆರವಣಿಗೆಯೂ ಇದೇ ವೇಳೆ ನಡೆಯಿತು.

ಕಾಪು ಪೇಟೆಯಲ್ಲಿ ಕಾಪು, ಉಳಿಯರಗೋಳಿ ಗ್ರಾಮ ಪಂಚಾಯಿತಿ ಕಾಪು ಜೆಸಿಐ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಕಾಪು ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಸಂತ ವಿ. ಸಾಲ್ಯಾನ್ ಕರಪತ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲೂ ಪ್ಲಾಸ್ಟಿಕ್ ನಿಷೇಧ ಕಾನೂನು ಜಾರಿ ತರಬೇಕಾಗಿದೆ. ಈ ಮೂಲಕ ರಾಜ್ಯದಲ್ಲಿಯೇ ಉಡುಪಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಎಂಬ ಘೋಷಣೆಯಾಗಿ ವಿಶೆಷ ಗಮನಸೆಳೆಯಬೇಕು ಎಂದರು.  ತಾಲ್ಲೂಕು ಗ್ರಾ.ಪಂ. ಒಕ್ಕೂಟದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಈ ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳ್ಳಬೇಕು. ಇದರಿಂದ ಪರಿಸರದ ಉಳಿವು ಸಾಧ್ಯ. ಗ್ರಾ.ಪಂ. ಒಕ್ಕೂಟದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಅಂಗೀಕರಿಸುತ್ತೇವೆ ಎಂದರು.

ಕಾಪು ಗ್ರಾ.ಪಂ. ಅಧ್ಯಕ್ಷ ಯೋಗೀಶ್ ರೈ, ಪಿಡಿಒ ಸುಂದರ ಪ್ರಭು, ಉಳಿಯಾರಗೋಳಿ ಗ್ರಾ.ಪಂ. ಅಧ್ಯಕ್ಷ ಅರುಣ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.