ADVERTISEMENT

ಜೀವನದಲ್ಲಿ ಸಂತುಲನ ಕಾಪಾಡಲು ಕಲೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 5:30 IST
Last Updated 22 ಅಕ್ಟೋಬರ್ 2012, 5:30 IST

ಉಡುಪಿ:  ಜೀವನದಲ್ಲಿ ಸಂತೋಷ, ಸತೋಲನ ಕಾಪಾಡಲು ಕಲೆ ಮುಖ್ಯ ಎಂದು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ  ಪ್ರೊ.ಪಿ.ರಾಮಕೃಷ್ಣ ಚಡಗ ಹೇಳಿದರು.

ಉಡುಪಿಯ ಗ್ಯಾಲರಿ ದೃಷ್ಟಿಯಲ್ಲಿ ದೃಶ್ಯ ಕಲಾ ಶಾಲೆಯ ಕಲಾವಿದರ ಕಲಾಕೃತಿಗಳ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಲೆಯಲ್ಲಿರುವ ಉನ್ನತ ಶಕ್ತಿ ಈಗಿನ ಸಮಾಜಕ್ಕೆ ಅಗತ್ಯ. ಕಲೆಯ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಮೂಡಿಸುವ ಕೆಲಸ ಹಿರಿಯ ಕಲಾವಿದರಿಂದ ಆಗಬೇಕು. ವೃತ್ತಿಯಲ್ಲಿರುವವರು ಕಲೆಯಲ್ಲಿ ತೊಡಗಿಸಿಕೊಂಡಾಗ ವೃತ್ತಿ ಉತ್ತಮವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ತಾಂತ್ರಿಕತೆ ಮುಂದುವರಿದಿರುವ ಈ ಸಮಯದಲ್ಲಿ ಕಲಾವಿದರು ತಮ್ಮ ಕಲಾಕೃತಿಗಳನ್ನು ಅಂತರ್ಜಾಲದ ಮೂಲಕ ಪ್ರಪಂಚಕ್ಕೆ ತೋರಿಸಿ ಕಲೆಯನ್ನು ಎಲ್ಲೆಡೆ ಪಸರಿಸಬೇಕು ಅದಕ್ಕಾಗಿ ಕಲಾವಿದರು ಅದರೊಂದಿಗೆ ಬೆರೆತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಜನರಿಗೆ ಸೌಂದರ್ಯ ಪ್ರಜ್ಞೆ,ಕಲಾಪ್ರಜ್ಞೆ ಮೂಡಿಸಲು ಕಲಾ ಶಾಲೆಗಳು ಪ್ರಯತ್ನಿಸಬೇಕು. ವಿದ್ಯಾರ್ಥಿಗಳಿಗೆ ಕಲಾಕೃತಿಗಳನ್ನು ಯಾವ ರೀತಿ ನೋಡಬೇಕು ಎಂಬ ಅರಿವನ್ನು ಕಲಾ ಶಾಲೆಗಳು ಮೂಡಿಸಬೇಕು. ಕಲಾವಿದರು ಪ್ರಗತಿಶೀಲರಾಗಬೇಕೆ ಹೊರತು ಪ್ರಚಾರಕ್ಕಾಗಿ ಕಲಾವಿದರಾಗಬಾರದು. ಅಭಿವೃದ್ಧಿಗೆ ಪೂರಕವಾಗಿ ಆರೋಗ್ಯಕರವಾದ ಬೆಳವಣಿಗೆ ಕಲಾಕ್ಷೇತ್ರದಲ್ಲಿ ಆಗಬೇಕು ಎಂದು ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್ ಹೇಳಿದರು.

ದೃಶ್ಯ ಕಲಾ ಶಾಲೆಯ ಕಲಾವಿದರಾದ ಚಂದ್ರಕಲಾ ರಾವ್, ವಸಂತ ಲಕ್ಷ್ಮಿ ಹೆಬ್ಬಾರ್, ಸುರೇನಾ ಶೆಟ್ಟಿ, ಗಾಯತ್ರಿ ಜಿ ನಾಯಕ್, ಮೇಧಾ ಜೆ ಪೈ, ಅಶೋಕ್ ಶೇಟ್, ಅನಿಲ್, ಪವನ್‌ರಾಜ್, ಮನ್‌ಪ್ರೀತ್, ಚಬ್ಬಾ, ಶ್ವೇತಾ ಕುಂದರ್, ಡಾ. ಶ್ವೇತಾ ಕಾಮತ್, ಮನಮೋಹನ್ ಪೈ, ಪ್ರದೀಪ್ ಶೆಟ್ಟಿ, ವೈಷ್ಣವಿ ಭಟ್, ಯು.ಆರ್. ಸೌಪಿಕಾ, ಡಿ. ಸ್ನೇಹಾ, ಡಿ.ಸ್ನೇಹಾ ಬಾಳಿಗಾ, ಲಕ್ಷ್ಮಿ ಕಾಮತ್, ಅನುಷಾ ಕಾಮತ್, ಮನಿಷಾ ರಾವ್, ಸ್ವಾತಿ ರಾವ್ ಕೆ ಮತ್ತು ಚಿತ್ರಾ ಆಚಾರ್ಯ ಅವರ ಕಲಾಕೃತಿಗಳು ಪ್ರದರ್ಶನದಲ್ಲಿದೆ. ಇದೇ 25ರ ವರೆಗೆ ಪ್ರದರ್ಶನ ನಡೆಯಲಿದೆ.

ಸತೀಶ್ ರಾವ್ ಇಡ್ಯಾ ಉಪಸ್ಥಿತರಿದ್ದರು. ಲಲಿತಕಲಾ ಅಕಾಡಮಿ ಗೌರವ ಪ್ರಶಸ್ತಿ ಪುರಸ್ಕೃತ ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್ ದಂಪತಿಯನ್ನು ದೃಶ್ಯ ಕಲಾ ಶಾಲೆಯ ಕಲಾವಿದರು ಸನ್ಮಾನಿಸಿದರು.
ಸಕು ಪಾಂಗಾಳ ಶ್ವೇತಾ ರಾವ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.