ADVERTISEMENT

ಟ್ಯಾಂಕ್ ನಿರುಪಯುಕ್ತ: ಬಾವಿಯಲ್ಲಿ ತ್ಯಾಜ್ಯ

ಶೇಷಗಿರಿ ಭಟ್ಟ
Published 10 ಸೆಪ್ಟೆಂಬರ್ 2011, 10:25 IST
Last Updated 10 ಸೆಪ್ಟೆಂಬರ್ 2011, 10:25 IST

ಬ್ರಹ್ಮಾವರ: ನೀರು ಪೂರೈಕೆಗೆ ಬೇಕಾದ ಎಲ್ಲಾ ವ್ಯವಸ್ಥೆ ಇದ್ದರೂ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂಬ ಗೋಳು ಹಂದಾಡಿ ಗ್ರಾಮ ಪಂಚಾಯಿತಿಯ (ಆಕಾಶವಾಣಿ ಕೇಂದ್ರದ ಹಿಂಭಾಗ) ಬ್ಯಾಂಕರ್ಸ್‌ ಕಾಲನಿ ಜನತೆಯದು.

ಇಲ್ಲಿ ನೀರು ಪೂರೈಸುವ ಬಾವಿ ಇದೆ, ನೀರು ಸರಬರಾಜಿಗೆ ಬೇಕಾದ ಓವರ್ ಹೆಡ್‌ಟ್ಯಾಂಕ್ ನಿರ್ಮಿಸಲಾಗಿದೆ. ಪಕ್ಕದಲ್ಲೇ ಅದಕ್ಕೆ ವಿದ್ಯುತ್ ಪೂರೈಕೆ ವ್ಯವಸ್ಥೆಗೆ ಬೇಕಾದ ಶೆಡ್ ಕೂಡಾ ಇದೆ. ಇಷ್ಟೆಲ್ಲಾ ಸೌಕರ್ಯವಿದ್ದರೂ ಸ್ಥಳೀಯರಿಗೆ ಈ ಬಾವಿ ನೀರು ಕುಡಿಯುವ ಯೋಗವಿಲ್ಲ.

ಕಾಲನಿಯಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ಮನೆಗಳಿಗೆ ನೀರು ಪೂರೈಸುವ ಸಲುವಾಗಿ ಎಂಟು ವರ್ಷ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾವಿ, ಓವರ್ ಹೆಡ್ ಟ್ಯಾಂಕ್ ಮತ್ತು ಪಂಪ್‌ಸೆಟ್ ಅಳವಡಿಸಲು ಶೆಡ್ ನಿರ್ಮಿಸಲಾಯಿತು.

ಪರಿಸರದ ನೂರಾರು ಮನೆಗಳಿಗೆ ಇಲ್ಲಿಂದಲೇ ನೀರಿನ ಸರಬರಾಜು ಕೂಡಾ ಆರಂಭವಾಯಿತು. ಆದರೆ ಕಳೆದ ನಾಲ್ಕು ವರ್ಷ ಹಿಂದೆ ಕೆಲವೊಂದು ಸಬೂಬು ಏಕಾಏಕಿ ನೀರು ಪೂರೈಕೆ ಸ್ಥಗಿತಗೊಳಿಸಲಾಯಿತು. ಈಗ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸೌಕರ್ಯ ನಿರುಪಯುಕ್ತವಾಗುತ್ತಿದೆ.

ಬಾವಿಗೆ ತ್ಯಾಜ್ಯ: `ಇಲ್ಲಿನ ಮನೆಯವರು ತ್ಯಾಜ್ಯವನ್ನು ಬಾವಿಯ ಸಮೀಪವೇ ತಂದು ಸುರಿಯುತ್ತ್ದ್ದಿದು, ಈ ಪ್ರದೇಶ ತ್ಯಾಜ್ಯ ವಿಲೇವಾರಿ ಘಟಕದಂತಾಗಿದೆ. ಕಸ ಬಾವಿಯನ್ನೂ ಸೇರುತ್ತಿದೆ. ಕುಡಿಯುವ ನೀರು ಒದಗಿಸಲೆಂದು ನಿರ್ಮಿಸಿದ ಇಲ್ಲಿನ ಸುಸಜ್ಜಿತ ಬಾವಿ ಈಗ ತ್ಯಾಜ್ಯ ಗುಂಡಿಯಂತಾಗಿದೆ. ಅಲ್ಲೇ ಸನಿಹದಲ್ಲಿ ಇರುವ ಓವರ್‌ಹೆಡ್ ಟ್ಯಾಂಕ್‌ಗೆ ಅಳವಡಿಸಲಾದ ಪೈಪ್‌ಗಳು ತುಕ್ಕು ಹಿಡಿದು ಹದಗೆಟ್ಟಿವೆ.

ಶೆಡ್‌ನಲ್ಲಿದ್ದ ಪಂಪ್‌ಸೆಟ್ ಕಳವಾಗಿದೆ. ಶೆಡ್  ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಒಟ್ಟಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು ನೀರಿನಲ್ಲಿ ಹೋಮ ಇಟ್ಟಂತಾಗಿದೆ~ ಎಂದು ಸ್ಥಳೀಯರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಬಾವಿಯನ್ನು ಸೇರಿರುವ ಕೊಳಚೆ ಪದಾರ್ಥಗಳು ತೇಲಾಡುತ್ತಿವೆ. ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದೆ. ಹಾಕಿದ್ದ ಪೈಪುಗಳು ಗುಜರಿಯವರ ಪಾಲಾಗುತ್ತಿದೆ. ಲಕ್ಷಾಂತರ ರೂಪಾಯಿಯ ಕಾಮಗಾರಿ ಹಾಳಾಗುತ್ತಿದೆ. ಆದರೂ ಗ್ರಾ.ಪಂ ಸದಸ್ಯರಾಗಲೀ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಈ  ಬಗ್ಗೆ ತಲೆ ಕೆಡಿಸಿಕೊಂಡಿಲ್ಲ~ ಎಂದು ಸ್ಥಳೀಯರು ಬೇಸರ ವ್ಯಕ್ತ ಪಡಿಸಿಸಿದರು.

`ಬಾವಿ ಹತ್ತಿರದಲ್ಲಿಯೇ ಆಟದ ಮೈದಾನವೂ ಇದೆ. ತ್ಯಾಜ್ಯದ ದುರ್ವಾಸನೆಯಿಂದಾಗಿ ಅಲ್ಲಿ ಆಡಿಕೊಳ್ಳಲೂ ಆಗುತ್ತಿಲ್ಲ~ ಎಂದು ಸ್ಥಳೀಯ ಪುಟಾಣಿ ಶರತ್ ಮತ್ತು ಅವನ ಸ್ನೇಹಿತರು ಅಳಲು ತೋಡಿಕೊಂಡರು.
`ಟ್ಯಾಂಕ್ ಹಾಗೂ ಬಾವಿಯ ಪುನಃಶ್ಚೇತನದ ಬಗ್ಗೆ ಸಂಬಂಧಪಟ್ಟವರು ಯೋಜನೆ ರೂಪಿಸಬೇಕು~ ಎಂಬ  ಆಗ್ರಹ ಸ್ಥಳೀಯರದು.

`ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ ನಮ್ಮೂರಿನ ಸ್ಥಿತಿ ವಿಭಿನ್ನ. ಇಲ್ಲಿನ ಸೌಕರ್ಯ ಸರಿಪಡಿಸುವ ಹೊಣೆ ಹೋರಲು ಯಾರೂ ಮುಂದೆ ಬರುತ್ತಿಲ್ಲ~ ಎಂಬುದು ಸ್ಥಳೀಯರ ಅಳಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.