ADVERTISEMENT

ಡಂಪಿಂಗ್‌ ಯಾರ್ಡ್‌ಗೆ ವಿರೋಧ

ಕುಂದಾಪುರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 8:55 IST
Last Updated 14 ಸೆಪ್ಟೆಂಬರ್ 2013, 8:55 IST

ಕುಂದಾಪುರ: ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಆಕ್ಷೇಪ. ಗುಲ್ವಾಡಿಯ ಕಾಂಕ್ರೀಟ್‌ ರಸ್ತೆ ಕಳಪೆ ನಿರ್ವಹಣೆಗೆ ಆಕ್ರೋಶ. ನಾಡ ದೋಣಿ ಮೀನುಗಾರರಿಗೆ ಸಕಾಲದಲ್ಲಿ ಸೀಮೆ ಎಣ್ಣೆ ಸರಬರಾಜಿಗೆ ಆಗ್ರಹ. ಕೆದೂರಿನ ಸರ್ಕಾರಿ ಭೂಮಿ ಪಡೆದ ಫಲಾನು­ಭವಿಗಳಿಗೆ ಹಕ್ಕುಪತ್ರ ನೀಡಲು ಒತ್ತಾಯ.

–ಇವು ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ  ಚರ್ಚೆಗೆ ಬಂದ ವಿಷಯಗಳು.
ಜಲಾನಯನ ಇಲಾಖೆಯ ಬ್ರಹ್ಮಾಂಡ ಭ್ರಷ್ಟಾ­ಚಾರದ ತನಿಖೆಗೆ ಆಗ್ರಹ ಹಾಗೂ ಪ್ರಾಧಿಕಾರದಿಂದ ಜನರಿಗಾಗುವ ಸಂಕಷ್ಟಗಳ ವಿಚಾರವೂ ಸೇರಿದಂತೆ ಹಲವು ವಿಷಯಗಳು ಚರ್ಚೆಗೊಳಗಾದವು.

ಸಾಲಿಗ್ರಾಮದ ಪಟ್ಟಣ ಪಂಚಾಯಿತಿ ಅನು­ಕೂಲಕ್ಕಾಗಿ ಕೆದೂರು ಗ್ರಾಮ ಪಂಚಾಯಿತಿ ವ್ಯಾಪ್ತಿ­ಯಲ್ಲಿ 2 ಎಕರೆ ಪ್ರದೇಶದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮವನ್ನು ಆಕ್ಷೇಪಿಸಿದ ಕೆದೂರು ಸದಾನಂದ ಶೆಟ್ಟಿ, ಸ್ಥಳೀಯಾಡಳಿತ ಹಾಗೂ ಗ್ರಾಮದ ಜನರೊಂದಿಗೆ ಸಮಾಲೋಚಿಸಿದೇ ಏಕಾಏಕಿ ಡಂಪಿಂಗ್ ಯಾರ್ಡ್ ನಿರ್ಮಿಸಲು ಮುಂದಾದರೆ ಗ್ರಾಮಸ್ಥರ ಸಮಾಧಿಯ ಮೇಲೆ ಯಾರ್ಡ್ ನಿರ್ಮಾಣ ಮಾಡಬೇಕಾದ ಪರಿಸ್ಥಿತಿ ಕಾಣಬೇಕಾದಿತು ಎಂದು ಎಚ್ಚರಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕಾಳಾವರ ದೀಪಕ್‌ಕುಮಾರ ಶೆಟ್ಟಿ, ಕೋಣಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಕುಂದಾಪುರ ಪುರಸಭೆಯ ಡಂಪಿಂಗ್ ಯಾರ್ಡ್‌ನಿಂದ ಆಗುತ್ತಿರುವ ತೊಂದರೆ­ಗಳನ್ನು ಕಂಡರೆ ಯಾವ ಪ್ರದೇಶದ ಜನರು ತಮ್ಮ ಗ್ರಾಮದಲ್ಲಿ ಡಂಪಿಂಗ್ ಯಾರ್ಡ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಕೋಣಿ ತಾಲ್ಲೂಕು ಪಂಚಾಯಿತಿ ಸದಸ್ಯ ಭಾಸ್ಕರ ಪೂಜಾರಿ ಇದಕ್ಕೆ ಪೂರಕವಾಗಿ ಮಾತನಾಡಿದರು.

ಸದಸ್ಯರ ಸಮಸ್ಯೆಗಳಿಗೆ ಉತ್ತರಿಸಿದ ತಹಶೀಲ್ದಾರ್ ಗಾಯತ್ರಿ ನಾಯಕ್ ಜನರ ಆಕ್ಷೇಪಣೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ಗುಲ್ವಾಡಿಯಲ್ಲಿ ಇತ್ತೀಚೆಗೆ ನಿರ್ಮಾಣ ಮಾಡಿದ ಕಾಂಕ್ರೀಟ್‌ ರಸ್ತೆ ಕಳಪೆ ನಿರ್ವಹಣೆ ಕುರಿತು ಇಲಾಖೆ­ಯ ಅಧಿಕಾರಿಗಳು ನೀಡಿದ ಬೇಜವಾಬ್ದಾರಿತನದ ಉತ್ತರದಿಂದ ಕೆರಳಿದ ಸದಸ್ಯರು ಮಾಧ್ಯಮದಲ್ಲಿ ರಸ್ತೆಯ ದುಃಸ್ಥಿತಿ ಬಗ್ಗೆ ವರದಿ ಬರುವವರೆಗೂ ಇಲಾಖೆಯ ಅಧಿಕಾರಿಗಳು ಎಲ್ಲಿಗೆ ಹೋಗಿದ್ದರು ಎಂದು ಖಾರವಾಗಿ ಪ್ರಶ್ನಿಸಿದರು. ಈ ವಿಚಾರದ ಕುರಿತು ಮಾತನಾಡಿದ ಎಚ್‌.ಮಂಜಯ್ಯ ಶೆಟ್ಟಿ, ರಾಜೂ ಎಸ್‌.ಪೂಜಾರಿ, ಕೆದೂರು ಸದಾನಂದ ಶೆಟ್ಟಿ, ಪ್ರದೀಪ್‌ಕುಮಾರ ಶೆಟ್ಟಿ, ಶಶಿಕಲಾ ಮುಂತಾದವರು ಸರ್ಕಾರದ ಹಣ ಈ ರೀತಿ ಪೋಲಾಗುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿರು­ವುದರ ಹಿಂದಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ವಿತರಣೆ ಕುರಿತು ಮಂಜು ಬಿಲ್ಲವ ಅವರು ಗಮನ ಸೆಳೆದಾಗ ಇದಕ್ಕೆ ಉತ್ತರಿಸಿದ ತಹಶೀಲ್ದಾರ್‌ ಸರ್ಕಾರದಿಂದ ಆದೇಶ ಬಂದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಳೆದ ಹಲವು ಸಭೆಗಳಿಂದ ಪ್ರಾಸ್ತಾಪವಾಗು­ತ್ತಿರುವ ಕೆದೂರು ಗ್ರಾಮ ಪಂಚಾಯಿತಿಯ ಸರ್ಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ವಿಚಾರ ಮತ್ತೆ ಈ ಸಭೆಯಲ್ಲಿಯೂ ಪ್ರಾಸ್ತಾಪಗೊಂಡಿತು. 

ಸದಾನಂದ ಶೆಟ್ಟಿ ಈ ಉತ್ತರದಿಂದ ಅಸಮಾ­ಧಾನಗೊಂಡರು.

ತಾಲ್ಲೂಕಿನಲ್ಲಿ ಜಲಾಯನ ಇಲಾಖೆಯ ಕಾಮ­ಗಾರಿಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಸಭೆಯ ಗಮನ ಸೆಳೆದ ನವೀನಚಂದ್ರ ಶೆಟ್ಟಿ ಜನ ದಂಗೆ ಏಳುವ ಮೊದಲು  ಇಲಾಖೆಯ ಮುಖ್ಯಸ್ಥರು ಭ್ರಷ್ಟಾಚಾರ­ಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಗೋಪಾಲ ಶೆಟ್ಟಿ, ಉಪಾಧ್ಯಕ್ಷೆ ಹೇಮಾವತಿ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೊಗವೀರ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.