ADVERTISEMENT

ಡಿಸೆಂಬರ್‌ನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 4:50 IST
Last Updated 20 ಅಕ್ಟೋಬರ್ 2012, 4:50 IST

ಉಡುಪಿ:`ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ಸಮಾವೇಶವನ್ನು ಉದ್ಯಾವರದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ~ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಜಿಲ್ಲೆಯ ಅಲ್ಪಸಂಖ್ಯಾತರನ್ನು, ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಅಭಿಯಾನ ನಡೆಸಲಾಗುತ್ತದೆ. ವಿಧಾಸಭಾ ಕ್ಷೇತ್ರಗಳಲ್ಲಿ ನಡೆಯುವ ಈ ಅಭಿಯಾನದಲ್ಲಿ ಕಾರ್ಯಕರ್ತರನ್ನು ಪಕ್ಷಕ್ಕೆ ಆಹ್ವಾನಿಸಲಾಗುತ್ತದೆ.

ಡಿಸೆಂಬರ್ ಮೊದಲ ವಾರದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಅಧಿಕೃತವಾಗಿ ಎಲ್ಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಮಾವೇಶಕ್ಕೆ ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಜಮೀರ್ ಅಹಮ್ಮದ್ ಖಾನ್ ಮುಂತಾದ ಮುಖಂಡರು ಆಗಮಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಲ್ಪಸಂಖ್ಯಾತರ ಕಲ್ಯಾಣ ಮಾಡುವಲ್ಲಿ ವಿಫಲವಾಗಿವೆ. ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್‌ಗಳಾಗಿ ಬಳಸಿಕೊಂಡಿರುವ ಈ ಪಕ್ಷಗಳು ಯಾವುದೇ ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಇಂದಿನ ಈ ಸ್ಥಿತಿಯಲ್ಲಿ ಅಲ್ಪಸಂಖ್ಯಾರಿಗೆ ರಕ್ಷಣೆ ಕೊಡುವಲ್ಲಿ ಸಹ ಪಕ್ಷಗಳು ವಿಫಲವಾಗಿವೆ ಎಂದು ಅವರು ಆರೋಪಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬೆಂಗಳೂರಿನಲ್ಲಿ ಹಜ್ ಭನವಕ್ಕಾಗಿ ಅವರ ಅವಧಿಯಲ್ಲಿಯೇ ಜಮೀನು ಮಂಜೂರು ಮಾಡಲಾಯಿತು. ಆದ್ದರಿಂದ ಅಲ್ಪಸಂಖ್ಯಾತರ ಜೆಡಿಎಸ್ ಪರವಾಗಿರುತ್ತಾರೆ ಎಂಬ ವಿಶ್ವಾಸ ಇದೆ ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮ್ಮದ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹಮ್ಮದ್ ಅಕ್ರಂ ಕಾರ್ಕಳ, ಕಾರ್ಯದರ್ಶಿ ಹನೀಫ್ ಹೆಜಮಾಡಿ, ರಾಜ್ಯ ಕಾರ್ಯದರ್ಶಿ ಉಮರ್ ಫಾರೂಕ್, ಫ್ಲಾಸಿಡ್ ಜಾನ್ ಪ್ರಸನ್ನ, ಜಹೀರ್ ಅಹಮ್ಮದ್ ಬೆಳಪು, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಪದಾಧಿಕಾರಿಗಳ ಸಭೆ:ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಸಮಾವೇಶ ನಡೆಸುವ ಬಗ್ಗೆ ಜೆಡಿಎಸ್ ಪದಾಧಿಕಾರಿಗಳ ಸಭೆ ಅಧ್ಯಕ್ಷ ಮಹಮ್ಮದ್ ಆಕ್ರಂ ಕಾರ್ಕಳ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಹಿರಿಯ ಮುಖಂಡರನ್ನು ಆಹ್ವಾನಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕಾರ್ಕಳ ಬ್ಲಾಕ್ ಅದ್ಯಕ್ಷ ನಜಿರ್ ಬಂಗ್ಲಗುಡ್ಡೆ, ಕಾಪು ಮಹಿಳಾ ಘಟಕದ ಅಧ್ಯಕ್ಷೆ ಆಬಿದಾ ಭಾನು, ಜಿಲ್ಲಾ ಕಾರ್ಯದರ್ಶಿಗಳಾದ ಆಬ್ದುಲ್ ಬಶೀರ್, ಮೈಮುನ ಮಲ್ಲಾರು, ಖೈರುನ್ನಿಸಾ ಬೆಳಪು, ಫೌಜಿಯಾ, ರಘುಚಂದ್ರ ಕಾರ್ಕಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.