ADVERTISEMENT

ತುಂಬೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಅಡ್ಡಿ

ಬಂಟ್ವಾಳ: ಅಕಾಲಿಕ ಮಳೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 9:18 IST
Last Updated 18 ಡಿಸೆಂಬರ್ 2014, 9:18 IST

ಬಂಟ್ವಾಳ: ಮಂಗಳೂರು ಮಹಾನಗರ ಪಾಲಿಕೆ ಪ್ರದೇಶಕ್ಕೆ ಹೆಚ್ಚುವರಿ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ಜಲಮಂಡಳಿ ವತಿಯಿಂದ  ನಗರ ನೀರು ಸರಬರಾಜು ಯೋಜನೆಯಡಿ ₨40ಕೋಟಿ ವೆಚ್ಚದಲ್ಲಿ ಐದು ವರ್ಷಗಳ ಹಿಂದೆ ಆರಂಭಗೊಂಡಿರುವ ತುಂಬೆ ಎರಡನೇ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಅಕಾಲಿಕ ಮಳೆ ಅಡ್ಡಿಯಾಯಿತು.

ಮಂಗಳವಾರ ಮುಂಜಾನೆ ಸಹಿತ ಒಟ್ಟು ಎರಡು ಬಾರಿ ದಿಢೀರನೆ ಬಿದ್ದ ಅಕಾಲಿಕ ಭಾರಿ ಮಳೆಗೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಜೆಸಿಬಿ, ಹಿಟಾಚಿಯಂತಹ ಬೃಹತ್ ಯಂತ್ರೋಪಕರಣ ಸಹಿತ ಸಿಮೆಂಟ್, ಕಬ್ಬಿಣ, ಜೆಲ್ಲಿ ಮತ್ತಿತರ ಸಾಮಾಗ್ರಿ ಸಾಗಾಟಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆಯ ಒಂದು ಭಾಗವು ನೆರೆನೀರಿನ ರಭಸಕ್ಕೆ ಬಹುತೇಕ ಕೊಚ್ಚಿ ಹೋಗಿದೆ. ಶಂಭೂರು ಎಎಂಆರ್ ಅಣೆಕಟ್ಟೆ­ಯಿಂದ ಮಂಗಳವಾರ ಮುಂಜಾನೆ ದಿಢೀರನೆ ಹೆಚ್ಚುವರಿ ನೀರು ಹರಿಯಲು ಬಿಟ್ಟಿರುವುದೇ ಇದಕ್ಕೆ ಕಾರಣ ಎಂಬ ಆರೋಪವೂ ವ್ಯಕ್ತವಾಗಿದೆ.

ವಿಷಯ ತಿಳಿದ ಜಲಮಂಡಳಿ ಹಿರಿಯ ಎಂಜಿನಿ­ಯರ್ ಎನ್.ನಟರಾಜ್, ರಂಗರಾಜು ಮತ್ತಿತರರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಆರಂಭದಲ್ಲಿ ಸ್ಥಳೀಯ ನೂರಾರು ಎಕರೆ ಕೃಷಿಭೂಮಿ ಮುಳುಗಡೆ ಭೀತಿ ಎದುರಿಸುತ್ತಿರುವ ಕೃಷಿಕರು ಸಹಿತ ವಿವಿಧ ಸಂಘಟನೆಗಳ ಪ್ರತಿಭಟನೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನ, ಪರಿಹಾರಧನ ವಿತರಣೆ, ಗುತ್ತಿಗೆದಾರರ ಬದಲಾವಣೆ ಮತ್ತಿತರ ನೆಪದಲ್ಲಿ ಕಾಮಗಾರಿ ವಿಳಂಬಗೊಂಡಿತ್ತು. ಇದೀಗ ಅಕಾಲಿಕ ಮಳೆಯು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರು ಸ್ವತಃ ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ತ್ವರಿತಗೊಳಿಸಲು ಸೂಚಿಸಿದ್ದರು.

ಈಗಾಗಲೇ ಇರುವ ಅಣೆಕಟ್ಟೆ 13 ಅಡಿ ಎತ್ತರ ಹೊಂದಿದ್ದು, ಇದೀಗ ನಿರ್ಮಾಣವಾಗುವ ಅಣೆಕಟ್ಟೆ ಏಳು ಮೀಟರ್ ಎತ್ತರ ಹೊಂದಿದೆ. ಒಟ್ಟು 32 ಆಧಾರಸ್ತಂಭ (ಪಿಲ್ಲರ್) ಹೊಂದಿರುವ ಅಣೆಕಟ್ಟೆ­ಯಲ್ಲಿ ಈಗಾಗಲೇ 12 ಪಿಲ್ಲರ್ ಮಾತ್ರ ಪೂರ್ಣಗೊಂಡು, ಇದರಲ್ಲಿ ಒಂಭತ್ತು ಪಿಲ್ಲರ್‌ ಮೇಲ್ಭಾಗದಲ್ಲಿ ಸ್ಲ್ಯಾಬ್ ಕಾಮಗಾರಿಗೂ ನಡೆದಿದೆ. 10 ಪಿಲ್ಲರ್‌ಗೆ ಕೆಳಭಾಗದಲ್ಲಿ ಬೆಡ್ ನಿರ್ಮಿಸ­ಲಾಗಿದ್ದು, ಐದು ಪಿಲ್ಲರ್‌ನ ಬೆಡ್ ಕಾಮಗಾರಿ ನಡೆಸಲು ನೀರಿನ ಒತ್ತಡ ಅಡ್ಡಿಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.