ADVERTISEMENT

ದೇವಾಲಯ ದೇವರ ಮೂರ್ತಿಗೆ ಕೇಂದ್ರೀಕೃತವಾಗಿಲ್ಲ

ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 14:11 IST
Last Updated 6 ಮೇ 2018, 14:11 IST

ಕುಂದಾಪುರ: ದೇವಾಲಯದಲ್ಲಿ ಪೂಜಿಸುವ ಮೂರ್ತಿ ಚಿಕ್ಕದಾದರೂ ದೇವಾಲಯ ಏಕೆ ದೊಡ್ಡದಿದೆ ಎನ್ನುವ ಜಿಜ್ಞಾಸೆ ಚಿಂತನೆಗೆ ಒಳಪಡಿಸಿದಾಗ ಅದರ ಹಿಂದಿರುವ ನೈಜ ಸತ್ಯದ ವಿರಾಟ್‌ ದರ್ಶನ ದೊರಕುತ್ತದೆ ಎಂದು ಸುಬ್ರಹ್ಮಣ ಮಠದ ಮಠಾಧೀಶ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಕುಂಭಾಸಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ಶುಕ್ರವಾರ ಗಂಗೊಳ್ಳಿ ಹೊಸ್ಮನೆ ದಿ.ಶ್ರೀಮತಿ ಗೌರಮ್ಮ ಮತ್ತು ದಿ.ಮಂಜುನಾಥ ಶೇರೆಗಾರ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ದೇವಾಲಯಗಳು ಕೇವಲ ದೇವರ ಮೂರ್ತಿಗಳಿಗೆ ಕೇಂದ್ರಿತವಾಗಿಲ್ಲ. ನಮ್ಮ ಸಂಸ್ಕೃತಿಗೆ, ಸಂಸ್ಕಾರ, ಚರಿತ್ರೆಗೆ ಹಾಗೂ ನಂಬಿಕೆಗಳಿಗೂ ಆಲಯ ಕೇಂದ್ರವಾಗಿದೆ. ಭಕ್ತಿಯ ಶೃದ್ಧೆ, ಸನಾತನ ಪರಂಪರೆಯ ನಂಬಿಕೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಗಮಗಳ ಮೂಲಕ್ಷೇತ್ರ ದೇವಾಲಯಗಳಾಗಿದೆ ಎಂದು ಹೇಳಿದರು.

ADVERTISEMENT

ಕುಂಭಾಸಿಯಲ್ಲಿ ಮೂಡಿ ಬಂದಿರುವ ಅಧ್ಬುತ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ನೋಡುವಾಗ ಕೃಷ್ಣದೇವರಾಯ ನೆನಪಾಗುತ್ತದೆ. ಕಾಷ್ಠ ಹಾಗೂ ಶಿಲ್ಪ ರಚನೆ ವೈಭವ ಮೇಳೈಸಿರುವ ಈ ದೇಗುಲ ಭೂಲೋಕದ ಅಮರಾವತಿಯಂತೆ ಕಂಗೊಳಿಸುತ್ತಿದೆ. ಚರಿತ್ರೆ ಕೃಷ್ಣದೇವರಾಯ ಮತ್ತೆ ದೇವರಾಯರ ರೂಪದಲ್ಲಿ ಹುಟ್ಟಿ ಬಂದಿರಬೇಕು ಎನ್ನುವ ಭಾವನೆ ಮೂಡುತ್ತದೆ ಎಂದು ಮೆಚ್ಚುಗೆ ಮಾತು ಹೇಳಿದರು.

ಬಸ್ರೂರು ಮಹತೋಭಾರ ಮಹಾಲಿಂಗೇಶ್ವರದೇವಸ್ಥಾನ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಧಾರ್ಮಿಕ ಚಿಂತಕ ಪಂಜ ಭಾಸ್ಕರ್‌ ಭಟ್‌, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಟ ಆನಂದ ಸಿ ಕುಂದರ್, ಪಡುಬಿದ್ರೆ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಗುರಿಕಾರ ಪದ್ಮನಾಭ ಕೊರ್ನಾಯರು, ಉದ್ಯಮಿ ಸುರೇಶ್ ಬೆಟ್ಟಿನ್ ಹಾಗೂ ಅನಿತಾ ದೇವರಾಯ ಶೇರೇಗಾರ್‌ ಇದ್ದರು.

ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಶೃಮಿಸಿದ ಮಾಧವನ್‌ ಪುದುವಾಳ್‌, ಎರ್ಮಾಳು ಸೀಮೆಯ ಕೇಂಜ ಶ್ರೀಧರ ತಂತ್ರಿ, ಮಹೇಶ್‌ ಮುನಿಯಂಗಳ್‌, ಪುರುಷೋತ್ತಮ ಭಟ್‌ ಮುಂಬೈ, ಶ್ರೀಧರ ಉಪಾಧ್ಯಾಯ ಕುಂಭಾಸಿ ಹಾಗೂ ಇಂಜಿನಿಯರ್‌ ಹರಿಪ್ರಸಾದ್‌ ಅವರನ್ನು ಚಿನ್ನದ ಸರವನ್ನು ಹಾಕಿ ಸನ್ಮಾನಿಸಲಾಯಿತು.

ಸುಷ್ಮಾಆಚಾರ್ ಪ್ರಾರ್ಥಿಸಿದರು, ದೇವರಾಯ ಎಂ.ಶೇರೇಗಾರ್‌ ಸ್ವಾಗತಿಸಿದರು, ರಶ್ಮಿರಾಜ್ ಹಾಗೂ ಬಸವರಾಜ್ ಶೆಟ್ಟಿಗಾರ್ ಸನ್ಮಾನಿತರ ಪರಿಚಯ ನೀಡಿದರು. ವಕೀಲ ರಾಘವೇಂದ್ರಚರಣ ನಾವಡ ಹಾಗೂ ತು ಜಯಶೀಲಾ ಕಾಮತ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.