ಕಾರ್ಕಳ: ನಮ್ಮ ಭವಿಷ್ಯ ರೂಪಿಸುವ ಶಿಲ್ಪಿಗಳು ನಾವಾಗಬೇಕು ಎಂದು ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಮೈಸೂರಿನ ಡಾ.ಆರ್.ಬಾಲಸುಬ್ರಹ್ಮಣ್ಯಂ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಇತ್ತೀಚೆಗೆ ಭುವನೇಂದ್ರ ಕಾಲೇಜಿನ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಮೈಸೂರಿನ ವಿವೇಕಾನಂದ ನಾಯಕತ್ವ ತರಬೇತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭಾರತ ನಿರ್ಮಾಣ್ ಸ್ವಯಂಸೇವಕರಿಗಾಗಿ `ಯುವಜನತೆ ಮತ್ತು ನಾಯಕತ್ವ~ದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಪ್ರಸ್ತುತ ಪರಿಸ್ಥಿತಿಯಲ್ಲಿ ಯುವ ಜನಾಂಗ ಜಗತ್ತಿನ ಸಂಪನ್ಮೂಲವಾಗಿ ಬೆಳೆಯಬೇಕಾಗಿದೆ ಎಂದರು.
ಸ್ವಾಮಿ ವಿವೇಕಾನಂದರು ಯುವಜನತೆಯ ಬಗ್ಗೆ ಬಹು ಹಿಂದೆಯೇ ಅಗಾಧ ಕನಸುಗಳನ್ನು ಇಟ್ಟುಕೊಂಡವರು. ವಿವೇಕಾನಂದರ ವಿಚಾರಧಾರೆ ಯುವಕರಿಗೆ ಪ್ರೇರಣೆಯಾಗಬೇಕು. ಹೀಗಾಗಿ ವಿವೇಕಾನಂದರನ್ನು ಕೇವಲ ಧಾರ್ಮಿಕ ನಾಯಕರಾಗಿ ಕಾಣದೇ ರಾಷ್ಟ್ರದ ಗುರುಗಳಾಗಿ ಕಾಣಬೇಕು ಎಂದರು.
ಕಾರ್ಯಾಗಾರವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮ ಸಾಲ್ಯಾನ್ ಉದ್ಘಾಟಿಸಿದರು. ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ರಾಜಗೋಪಾಲ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಾಂಡುರಂಗ ನಾಯಕ್, ಕಾಲೇಜಿನ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ದೇವಿದಾಸ ಎಸ್. ನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಸುದರ್ಶನ್ ಎಸ್. ಬೆಂಗಳೂರಿನ ಡಾ.ಭಾಗ್ಯಲಕ್ಷ್ಮಿ, ಮೈಸೂರಿನ ರವಿ ಶಿರಹಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ಕುಮಾರ್ ಕುಕ್ಕುಂದೂರು ಮತ್ತು ಭಾರತ ನಿರ್ಮಾಣ್ ಸ್ವಯಂಸೇವಕ ಸಂಯೋಜಕ ಸೀತಾರಾಮ ಹೆಬ್ಬಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.