ADVERTISEMENT

ನೀರಿನ ಮಾದರಿ ಪ್ರಯೋಗಾಲಯಕ್ಕೆ: ಸಚಿವ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 8:45 IST
Last Updated 12 ಫೆಬ್ರುವರಿ 2011, 8:45 IST

ಮಣಿಪಾಲ: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಿಂದ ಹೊರಬಿಡುವ ತ್ಯಾಜ್ಯ ನೀರಿನಿಂದ ಸರಳೇಬೆಟ್ಟು ಹಾಗೂ ಸ್ವರ್ಣ ಪ್ರದೇಶದ ಜನರು ತೊಂದರೆ ಅನುಭವಿಸುತ್ತಿರುವ ಪ್ರದೇಶಕ್ಕೆ ಪರಿಸರ ಸಚಿವ ಕೃಷ್ಣ ಪಾಲೆಮಾರ್ ಶುಕ್ರವಾರ ದಿಢೀರ್ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿದರು.

‘ಪ್ರಜಾವಾಣಿ’ ಪತ್ರಿಕೆ ಆಸ್ಪತ್ರೆ ತ್ಯಾಜ್ಯ ನೀರಿನಿಂದ ಸ್ಥಳೀಯರ ಸಮಸ್ಯೆ ಬಗ್ಗೆ ಶುಕ್ರವಾರ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಹಳ್ಳದ ನೀರಿಗೆ ಕೊಳಚೆ ನೀರು ಸೇರಿಕೊಂಡು ಸೃಷ್ಟಿಯಾಗಿರುವ ಕೊಚ್ಚೆಯನ್ನು ವೀಕ್ಷಿಸಿದ ಸಚಿವರು ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು. ‘ಅನೇಕ ತಲೆಮಾರಿನಿಂದ ನಾವಿಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ. ಈಗೆ ಈ ಕೊಳಚೆ ನೀರು ಗದ್ದೆ ಸೇರುತ್ತಿದೆ. ಗದ್ದೆಗಿಳಿದರೆ ಮೈತುರಿಕೆ ಉಂಟಾಗುತ್ತಿದೆ ಎಂದು ಕೃಷಿಕರು ಅಳಲು ತೋಡಿಕೊಂಡರು.

ಮೀನು ಕಾಣೆ: ‘ಇದೇ ಹಳ್ಳದಲ್ಲಿ ಮೊಳ ಉದ್ದದ ಮೀನುಗಳು ಜೀವಿಸುತ್ತಿದ್ದವು. ಈಗ ಕಾಣೆ ಮೀನು ಕಾಣಿಸುವುದು ಅಪೂರ್ವ. ಕೆಲವೊಮ್ಮೆ ತ್ಯಾಜ್ಯ ನೀರು ವಿಪರೀತ ದುರ್ನಾತದಿಂದ ಕೂಡಿರುತ್ತದೆ’ ಎಂದು ಸ್ಥಳೀಯರು ತಿಳಿಸಿದರು.ಬಾವಿಗಳ ನೀರು ಕಲುಷಿತಗೊಂಡಿರುವುದನ್ನೂ ಸಚಿವರ ಗಮನಕ್ಕೆ ತರಲಾಯಿತು.  ಹೂಳು ತುಂಬಿರುವುದರಿಂದ ಹಳ್ಳ ಮುಚ್ಚಿ ಹೋಗಿದೆ. ಇದರಿಂದ ಕೃಷಿಗೆ ಹಾನಿ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದರು. ಶೀಘ್ರ ಹಳ್ಳದ ಹೂಳೆತ್ತಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು ಎಂದು  ನಗರ ಸಭೆ ಆಯುಕ್ತ ಗೋಕುಲ್‌ದಾಸ್ ನಾಯಕ್‌ಗೆ ಸೂಚಿಸಿದರು. ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್  ಇದ್ದರು.

ಪರಿಸರ ಇಲಾಖಾಧಿಕಾರಿ ತರಾಟೆಗೆ
ಆಸ್ಪತ್ರೆಯ ತ್ಯಾಜ್ಯ ನೀರು ಸಂಸ್ಕರಣೆಗೆ ಒಳಪಡದೆಯೇ ಹೊರಬರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಹಾಯಕ ಪರಿಸರ ಅಧಿಕಾರಿ ಭಾಸ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾನೂನಿಗೆ ಎಲ್ಲರೂ ಸಮಾನರು. ತಪ್ಪು ಮಾಡಿದವರು ಎಷ್ಟೇ ದೊಡ್ಡ ಜನರಾಗಿರಲಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ತ್ಯಾಜ್ಯ ನೀರು ಸಂಸ್ಕರಿಸದೆಯೇ ಹಳ್ಳಕ್ಕೆ ಬಿಟ್ಟರೆ ದಂಡ ವಿಧಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲೂ ಹಿಂದೇಟು ಹಾಕಬಾರದು’ ಎಂದು ಅಧಿಕಾರಿಗೆ ಸೂಚಿಸಿದರು.

ಪರಿಸರ ಮಾಲಿನ್ಯ: ಕಟ್ಟುನಿಟ್ಟಿನ ಕ್ರಮ
‘ಯಾರೂ ಕೂಡಾ ತ್ಯಾಜ್ಯ ನೀರನ್ನು ನದಿಗೆ ಅಥವಾ ಹಳ್ಳಕ್ಕೆ ಸಂಸ್ಕರಿಸದೆ ನೇರವಾಗಿ ಬಿಡುವ ಹಾಗಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ತಪ್ಪಿತಸ್ಥರಿಗೆ ದಂಡ ಹಾಗೂ ಏಳು ವರ್ಷ ಕಠಿಣ ಸಜೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಪರಿಸರ ಇಲಾಖೆ 250ಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಂಡಿದೆ’ ಎಂದು ಪಾಲೆಮಾರ್ ಸುದ್ದಿಗಾರರಿಗೆ ತಿಳಿಸಿದರು.
ಪರಿಶೀಲನೆ ವೇಳೆ ಮೇಲ್ನೋಟಕ್ಕೆ ತ್ಯಾಜ್ಯ ನೀರು ಸಂಸ್ಕರಿಸದೆ ಹಳ್ಳಕ್ಕೆ ಬಿಟ್ಟಿರುವುದು ಮನವರಿಕೆ ಆಗಿದೆ. ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುತ್ತೇವೆ. ಆ ವರದಿ ಆಧಾರದಲ್ಲಿ ಅವರ ತ್ಯಾಜ್ಯ ನೀರು ಹೊರಗೆ ಬಿಡುವುದಕ್ಕೆ ಅವಕಾಶ ಕಲ್ಪಿಸುತ್ತೇವೆ’ ಎಂದರು.

ಇತ್ತೀಚೆಗೆ ಜನ ಕೂಡಾ ಎಚ್ಚೆತ್ತು ಕೊಂಡಿದ್ದಾರೆ. ಆಸ್ಪತ್ರೆ ಕಡೆಯಿಂದ ತ್ಯಾಜ್ಯ ನೀರನ್ನು ಹಳ್ಳಕ್ಕೆ ಬಿಡುತ್ತಿರುವುದು ಮಾಧ್ಯಮದ ಮೂಲಕ ನನಗೆ ತಿಳಿದುಬಂದಿದೆ. ಅದರಂತೆ ಸ್ಥಳ ಪರಿಶೀಲನೆ ನಡೆಸಿದ್ದೇನೆ’ ಎಂದರು.1 ಲಕ್ಷ ದಂಡ- 7ವರ್ಷ ಸಜೆಗೆ ಅವಕಾಶ:  ‘ಯಾರೂ ಕೂಡಾ ತ್ಯಾಜ್ಯ ನೀರು ಸಂಸ್ಕರಿಸದೆ ಹೊರಗೆ ಬಿಡುವುದಕ್ಕೆ ಅವಕಾಶವಿಲ್ಲ. ತಪ್ಪು ಮಾಡಿದವರು ಎಷ್ಟೇ ದೊಡ್ಡ ಜನರಾದರೂ ಕಠಿಣ ಕ್ರಮ ಕೈಗೊಳ್ಳದೆ ಬಿಡುವುದಿಲ್ಲ. ಪರಿಸರ ಮಾಲಿನು ಉಂಟುಮಾಡುವವರಿಗೆ  ರೂ 1 ಲಕ್ಷ ದಂಡ ಹಾಗೂ ಏಳು ವರ್ಷ ಸಜೆ ವಿಧಿಸುವುದಕ್ಕೆ ಅವಕಾಶವಿದೆ’ ಎಂದರು.

ನೀರು ಪರಿಸರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಪ್ರತಿ ಜಿಲ್ಲೆಯಲ್ಲೂ ಇರುವ ಅಧಿಕಾರಿಗಳನ್ನು ಸಂಪರ್ಕಿಸಬಹುದು ಅಥವಾ ಇಲಾಖೆಗೆ ದೂರು ನೀಡಲು ಟೋಲ್‌ಫ್ರೀ ದೂರವಾಣಿಗೆ ಕರೆಮಾಡಬಹುದು. ಮಾಲಿನ್ಯ ತಡೆಗಟ್ಟಲು ಇಲಾಖೆ ಸನ್ನದ್ಧವಾಗಿದೆ. ಗ್ರಾಮಮಟ್ಟದಲ್ಲಿ ಆಗಿರುವ ವಾಯುಮಾಲಿನ್ಯ ಮಾಪನ ಮಾಡಿ ಐದೇ ನಿಮಿಷದಲ್ಲಿ ವರದಿ ಪಡೆಯುವ ನಮ್ಮ ವಿಜ್ಞಾನ ತಂತ್ರಜ್ಞಾನ ಮುಂದುವರಿದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.