ADVERTISEMENT

ನೀರು ಪೋಲು ತಡೆಗೆ ‘ಕಂಟ್ರೋಲರ್‌’

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 9:31 IST
Last Updated 24 ಅಕ್ಟೋಬರ್ 2017, 9:31 IST

ಉಡುಪಿ: ನೀರು ವ್ಯರ್ಥವಾಗಿ ಹರಿಯುವುದನ್ನು ತಪ್ಪಿಸಲು ಹಾಗೂ ಅನಗತ್ಯ ವಿದ್ಯುತ್ ಬಳಕೆಗೆ ಕಡಿವಾಣ ಹಾಕಲು ಉಡುಪಿ ಜಿಲ್ಲೆಯ ಆರೂರು ಗ್ರಾಮ ಪಂಚಾಯಿತಿ ನೀರಿನ ಟ್ಯಾಂಕ್‌ಗೆ (ಓವರ್‌ ಹೆಡ್‌ ಟ್ಯಾಂಕ್) ‘ವಯರ್‌ಲೆಸ್‌ ವಾಟರ್ ಲೆವೆಲ್ ಕಂಟ್ರೋಲರ್’ ಸಾಧನ ಅಳವಡಿಸಿದೆ.

ಸ್ವಯಂಚಾಲಿತವಾಗಿ ಕೆಲಸ ಮಾಡುವ ಈ ಸಾಧನದಿಂದಾಗಿ ತಿಂಗಳಿಗೆ ಸುಮಾರು ₹2,500 ವಿದ್ಯುತ್ ಬಿಲ್ ಉಳಿತಾಯವಾಗುತ್ತಿದೆ. ಅಲ್ಲದೆ ಅಪಾರ ಪ್ರಮಾಣದ ನೀರು ಸಹ ಉಳಿತಾಯವಾಗುತ್ತಿದೆ. ಎಲ್ಲರಿಗೂ ಸಕಾಲದಲ್ಲಿ ನೀರು ಸರಬರಾಜು ಆಗುತ್ತಿರುವುದರಿಂದ ದೂರುಗಳು ಸಹ ಇಲ್ಲವಾಗಿವೆ.

ವಯರ್‌ಲೆಸ್‌ ವಾಟರ್ ಲೆವೆಲ್ ಕಂಟ್ರೋಲರ್ ಜಿಎಸ್‌ಎಂ ಮೊಬೈಲ್ ಫೋನ್ ತಂತ್ರಜ್ಞಾನದಂತೆ ಕೆಲಸ ಮಾಡುತ್ತದೆ. ಪಂಪ್‌ ಹೌಸ್‌ನಲ್ಲಿ ನಿಯಂತ್ರಣ ಸಾಧನವನ್ನು ಅಳವಡಿಸಿ ಅದಕ್ಕೆ ಮೊಬೈಲ್ ಫೋನ್ ಸಿಮ್ ಕಾರ್ಡ್ ಹಾಕಲಾಗುತ್ತದೆ.

ADVERTISEMENT

ಅದೇ ರೀತಿ ಟ್ಯಾಂಕರ್‌ ಒಳಗೆ ಟ್ರಾನ್ಸ್‌ಮೀಟರ್ ಕಂಟ್ರೋಲರ್ ಅಳವಡಿಸಲಾಗಿದೆ. ನೀರು ಶೇ 80ರಷ್ಟು ಭರ್ತಿಯಾದ ನಂತರ ಮತ್ತು ಅದು ಶೇ 20ಕ್ಕೆ ಇಳಿದಾಗ ಆ ಸಂದೇಶ ನಿಯಂತ್ರಣ ಸಾಧನಕ್ಕೆ ತಲುಪುವಂತೆ ಸೆನ್ಸಾರ್ ಸಹ ಅಳಡಿಸಲಾಗಿದೆ. ಟ್ಯಾಂಕ್ ಮತ್ತು ಪಂಪ್ ಹೌಸ್‌ನ ಸಿಮ್‌ಗಳಿಗೆ ಸಂಪರ್ಕ ಏರ್ಪಡಿಸಲಾಗಿದೆ.

ಟ್ಯಾಂಕ್ ಶೇ 80ರಷ್ಟು ಭರ್ತಿಯಾದ ನಂತರ ಸೆನ್ಸಾರ್‌ನಿಂದ ಮಾಹಿತಿ ನಿಯಂತ್ರಣ ಸಾಧನಕ್ಕೆ ತಲುಪುತ್ತದೆ. ಅಲ್ಲಿಂದ ಪಂಪ್‌ಹೌಸ್‌ನಲ್ಲಿರುವ ಸಾಧನಕ್ಕೆ ಮಾಹಿತಿ ಮುಟ್ಟಿ ಮೋಟರ್ ಬಂದ್ ಆಗುತ್ತದೆ.

‘ಈ ಮೊದಲು ಪಂಪ್‌ ಆಪರೇಟರ್ ಅವರೇ ಖುದ್ದಾಗಿ ಹೋಗಿ ಆನ್ ಮತ್ತು ಆಫ್ ಮಾಡಬೇಕಿತ್ತು. ವಿದ್ಯುತ್ ಯಾವ ಸಮಯದಲ್ಲಿ ಇರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಆದ್ದರಿಂದ ಸಮಯ ವ್ಯಯವಾಗುತ್ತಿತ್ತು. ಅಲ್ಲದೆ ಟ್ಯಾಂಕ್ ತುಂಬಿದ ತಕ್ಷಣ ಮೋಟಾರ್ ಆಫ್ ಮಾಡಲಾಗದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತಿತ್ತು. ವಾಟರ್ ಲೆವೆಲ್ ಕಂಟ್ರೋಲರ್ ಅಳವಡಿಸಿದ ನಂತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ’ ಎನ್ನುತ್ತಾರೆ ಆರೂರು ಪಂಚಾಯಿತಿಯ ಪಿಡಿಒ ಗೀತಾ ಬಾಳಿಗಾ.

‘ಈ ಸಾಧನ ಅಳವಡಿಸುವ ಮೊದಲು ಪ್ರತಿ ತಿಂಗಳು ಸುಮಾರು ₹6,500 ನೀರಿನ ಬಿಲ್ ಬರುತ್ತಿತ್ತು. ಆದರೆ ಈಗ ಅದು ₹4 ಸಾವಿರಕ್ಕೆ ಇಳಿದಿದೆ. ಟ್ಯಾಂಕ್ ತುಂಬಿದ ತಕ್ಷಣ ಪಂಪ್ ಬಂದ್‌ ಆಗುವುದರಿಂದ ವಿದ್ಯುತ್ ಉಳಿತಾಯವಾಗುತ್ತಿದೆ. ನೀರು ಪೋಲಾಗುತ್ತಿರುವ ಬಗ್ಗೆ ಹಾಗೂ ಸಕಾಲಕ್ಕೆ ನೀರು ಬಿಡದಿರುವ ಬಗ್ಗೆ ಈ ಹಿಂದೆ ದೂರುಗಳು ಬರುತ್ತಿದ್ದವು. ಆದರೆ ಈಗ ಇಲ್ಲ’ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷ ರಾಜೀವ ಕುಲಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.