ADVERTISEMENT

ಪತ್ರಕರ್ತರ ಮೇಲೆ ಹಲ್ಲೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 8:20 IST
Last Updated 3 ಮಾರ್ಚ್ 2012, 8:20 IST

ಉಡುಪಿ: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ವಕೀಲರ ವಿರುದ್ಧ ಘೋಷಣೆ ಕೂಗಿದ ಪತ್ರಕರ್ತರು ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವುದಕ್ಕಾಗಿ ವಕೀಲರು ನಡೆಸಿದ ಕೃತ್ಯವನ್ನು ಖಂಡಿಸಿದರು.

`ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಮತ್ತು ಪತ್ರಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿದೆ. ಆದರೆ, ತಪ್ಪಿತಸ್ಥರಿಗೆ ಶಿಕ್ಷೆಯಾದ ಉದಾಹರಣೆಗಳಿಲ್ಲ. ಕಾನೂನು ಪಾಲನೆ ಮಾಡಬೇಕಾದ ವಕೀಲರೇ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ರಾಕ್ಷಸೀ ಪ್ರವತ್ತಿಯನ್ನು ತೋರಿರುವುದು ಅಕ್ಷಮ್ಯ ಅಪರಾಧ.

ಕಾನೂನು ರಕ್ಷಕರಾಗಿರಬೇಕಾದವರು ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮದ ಮೇಲೆ ನಡೆಸಿದ ಹಲ್ಲೆ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದರೆ ತಪ್ಪಾಗದು. ಅದೇ ರೀತಿ, ಪೊಲೀಸರ ಮೇಲೆಯೂ ಹಲ್ಲೆ ಮಾಡಲಾಗಿದೆ. ಆ ಕತ್ಯವನ್ನೂ ಸಂಘ ಖಂಡಿಸುತ್ತದೆ.

ಅಪರಾಧಿಗಳನ್ನು ಶೀಘ್ರ ಪತ್ತೆಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ರಾಜ್ಯದಲ್ಲಿ ಮಾಧ್ಯಮ ರಂಗ ಸ್ವತಂತ್ರವಾಗಿ ಕಾರ‌್ಯನಿರ್ವಹಿಸುವ ವಾತಾವರಣವನ್ನು ಕಲ್ಪಿಸಬೇಕು~ ಎಂದು ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಖಂಡನೆ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ  ಹಾಗೂ ಭಾರತೀಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ಖಂಡಿಸಿದರು.

`ವಕೀಲರ ಪರಿಷತ್ ಸದಸ್ಯನಾಗಿ ಈ ಘಟನೆ ಖಂಡಿಸುತ್ತೇನೆ. ನ್ಯಾಯಾಲಯದ ಆವರಣದಲ್ಲಿ ನಡೆದ ಈ ಘಟನೆಯನ್ನು ಸರ್ಕಾರ ಕೇವಲ ಪರಿಶೀಲಿಸಿದರೆ ಸಾಲದು, 24 ಗಂಟೆಯೊಳಗೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕು~ ಎಂದರು.

 ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗ ದ ಅಧ್ಯಕ್ಷ ಸಿ.ಎಂ.ಧನಂಜಯ ಅವರೂ ಘಟನೆಯನ್ನು ಖಂಡಿಸಿದ್ದಾರೆ. ವಕೀಲರು ಮಾಧ್ಯಮದವರ ಮೇಲೆ ನಡೆಸಿದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ಇಂತಹ ಕೃತ್ಯವನ್ನು ಯಾರೇ ಮಾಡಿದರೂ ಕೂಡ ಅದು ಅಪರಾಧವೇ. ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆಯಾಗಬೇಕು~ ಎಂದರು.

ವಕೀಲರಿಂದ ಮಾಧ್ಯಮದವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, `ರಾಜ್ಯದಲ್ಲಿ ಗೂಂಡಾಗಳು ಇರಲಿಲ್ಲ, ಆದರೆ ಈಗ ವಕೀಲರೇ ಇಂತಹ ಗೂಂಡಾಗಿರಿ ಪ್ರವೃತ್ತಿಯನ್ನು ತೋರುವ ಮೂಲಕ ಕೆಟ್ಟ ಕೆಲಸಕ್ಕೆ ಪ್ರಚೋದನೆ ನೀಡುತ್ತಿದ್ದಾರೆ~ ಎಂದು ಟೀಕಿಸಿದ್ದಾರೆ.

ಹೆಬ್ರಿ: ಕ್ರಮಕ್ಕೆ ಆಗ್ರಹ
ಹೆಬ್ರಿ: ಬೆಂಗಳೂರಿನಲ್ಲಿ ಶುಕ್ರವಾರ ವಕೀಲರು ಪತ್ರಕರ್ತರ ಮೇಲೆ ನಡೆಸಿದ ಹಲ್ಲೆಯನ್ನು ಹೆಬ್ರಿ ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ.

`ಇದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ. ಇದರಿಂದ ನಾಡಿಗೆ ತಪ್ಪು ಮಾಹಿತಿ ಹೋಗುತ್ತದೆ. ಹಲ್ಲೆ ನಡೆಸಿದ ಎಲ್ಲಾ ವಕೀಲರನ್ನು ತಕ್ಷಣ ಬಂಧಿಸಬೇಕು~ ತಪ್ಪಿತಸ್ಥರ ಮೇಲೆ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳಬೇಕು~ ಎಂದು ಸಂಘ ಒತ್ತಾಯಿಸಿದೆ.

ಕರವೇ ಖಂಡನೆ: ವಕೀಲರು ಪತ್ರಕರ್ತರ ಮೇಲಿನ ಹಲ್ಲೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ ಖಂಡಿಸ್ದ್ದಿದಾರೆ.

ಹಲ್ಲೆಗೆ ಖಂಡನೆ
ಪಡುಬಿದ್ರಿ: ಬೆಂಗಳೂರಿನಲ್ಲಿ ಮಾಧ್ಯಮದವರ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ರಾಜ್ಯಸಭೆ ಉಪಸಭಾಪತಿ ರೆಹಮಾನ್ ಖಾನ್ ಖಂಡಿಸಿದ್ದಾರೆ.

ಇದು ಪ್ರಜಾಪ್ರಭುತ್ವದ ಮೇಲೆ ನಡೆದ ಹಲ್ಲೆಯಾಗಿದೆ ಎಂದಿದ್ದಾರೆ.
ದಸಂಸ ಖಂಡನೆ: ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪಡುಬಿದ್ರಿ ಘಟಕ ತೀವ್ರವಾಗಿ ಖಂಡಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.