ADVERTISEMENT

ಬಂದರು ಕಾಮಗಾರಿ ಸಾಮಗ್ರಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 9:10 IST
Last Updated 2 ಮಾರ್ಚ್ 2012, 9:10 IST

ಕಿರಿಮಂಜೇಶ್ವರ (ಬೈಂದೂರು): ಇಲ್ಲಿನ ಕೊಡೇರಿ ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿಗೆ ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳನ್ನು ರಾತ್ರಿ ಹೊತ್ತು ಕದ್ದು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಸ್ಥಳೀಯರು ಸಾಮಾಗ್ರಿ ಸಾಗಿಸಿದ ವಾಹನ ತಡೆದು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ಹಕ್ರೆಮಠ ಎಂಬಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಿರು ಬಂದರು ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು `ಯೋಜಕಾ~ ಸಂಸ್ಥೆ ಗುತ್ತಿಗೆ ಪಡೆದಿದೆ. ರಾತ್ರಿ 8 ಗಂಟೆ ಹೊತ್ತಿಗೆ ಸಂಸ್ಥೆಗೆ ಸೇರಿದ ಮಿನಿ ಟಿಪ್ಪರ್ ಲಾರಿಯಲ್ಲಿ ಕಬ್ಬಿಣ, ಜಲ್ಲಿ ಮತ್ತು ಸಿಮೆಂಟ್ ತುಂಬಿಕೊಂಡ ಲಾರಿ ಸಮೀಪದ ಗ್ರಾಮ ಪಂಚಾಯಿತಿ ಸದಸ್ಯ ನರೇಶ ಖಾರ್ವಿ ಅವರು ಮನೆ ನಿರ್ಮಿಸುತ್ತಿದ್ದ ಸ್ಥಳಕ್ಕೆ ಒಯ್ದು, ಸಾಮಗ್ರಿಗಳನ್ನು ಖಾಲಿ ಮಾಡಿ ಹಿಂದಕ್ಕೆ ಬರುವಾಗ ಸಂಶಯಗೊಂಡ ಸ್ಥಳೀಯರು ಲಾರಿಯನ್ನು ತಡೆದರು. ಸುದ್ದಿ ಹಬ್ಬಿದಾಗ ನೂರಾರು ಜನ ಸೇರಿದರು. ಪೊಲೀಸರೂ ಸ್ಥಳಕ್ಕಾಗಮಿಸಿದರು. ಕುಂದಾಪುರ ಮತ್ತಿತರ ಕಡೆಗಳಿಂದ ಮಾಧ್ಯಮದ ಪ್ರತಿನಿಧಿಗಳು ದೌಡಾಯಿಸಿದರು. ಜನ ಲಾರಿಯನ್ನು ನರೇಶ ಖಾರ್ವಿ ಮನೆಗೆ ಕೊಂಡೊಯ್ದು, ಸಾಮಗ್ರಿಗಳನ್ನು ಅಲ್ಲಿ ಇಳಿಸಿರುವುದನ್ನು ಖಚಿತ ಪಡಿಸಿಕೊಂಡರು.

ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಗ್ರಾ.ಪಂ ಸದಸ್ಯ ನರೇಶ ಖಾರ್ವಿ ಕಾಮಗಾರಿಗೆ ತಾವು ಉಚಿತವಾಗಿ ನೀರು ಒದಗಿಸುತ್ತಿರುವುದಕ್ಕೆ ಪ್ರತಿಯಾಗಿ ಸಂಸ್ಥೆಯಿಂದ ಈ ಔದಾರ್ಯ ಪಡೆಯಲಾಗಿದೆ ಎಂದರು. ಅದನ್ನು ಸಂಸ್ಥೆಯ ಎಂಜಿನಿಯರ್ ಅವರೂ ಅನುಮೋದಿಸಿದರು ಎನ್ನಲಾಗಿದೆ.

ಈ ಬಗ್ಗೆ ತನಿಖೆ ನಡೆಸುವುದಾಗಿ  ಪೊಲೀಸರು ಭರವಸೆ ನೀಡಿದ ಬಳಿಕ ವಿವಾದ ತಣ್ಣಗಾಯಿತು.

ಪ್ರಕರಣಕ್ಕೆ ತಿರುವು: ಗುರುವಾರ ಮಧ್ಯಾಹ್ನದ ಹೊತ್ತಿಗೆ ಲಾರಿಯ ಚಾಲಕ ಉದಯ ದೇವಾಡಿಗ ತಾವು ಚಲಾಯಿಸುತ್ತಿದ್ದ ಲಾರಿಗೆ ತಡೆಯೊಡ್ಡಿದರೆನ್ನಲಾದ ನಾಲ್ವರ ವಿರುದ್ಧ ಬೈಂದೂರು ಠಾಣೆಗೆ ದೂರು ಸಲ್ಲಿಸುವುದರೊಂದಿಗೆ ಪ್ರಕರಣ ಮತ್ತೆ ತಿರುವು ಪಡೆಯಿತು.
 
`ಸಂಜೆ ಏಳು ಗಂಟೆ ಹೊತ್ತಿಗೆ ಲಾರಿ ಚಲಾಯಿಸಿಕೊಂಡು ಬರುತ್ತಿರುವಾಗ ಕೊಡೇರಿಯ ಶಾಲಾ ಮೈದಾನದ ಬಳಿ ರಸ್ತೆಯಲ್ಲಿ ಟಿ. ನಾರಾಯಣ, ವಿಜಯ ಪೂಜಾರಿ, ವಿಜಯ ಖಾರ್ವಿ ಮತ್ತು ಕುಳ್ಳಿ ಗೋವಿಂದ ಎಂಬವರು ಅಕ್ರಮ ಕೂಟ ರಚಿಸಿಕೊಂಡು ತಡೆದರು.
 
ಲಾರಿಯಿಂದ ಹೊರಗೆಳೆದು ಕೈಯಿಂದ ಹಲ್ಲೆಗೈದರು. ಬೈದು, ಜೀವ ಬೆದರಿಕೆ ಹಾಕಿದರು. ಲಾರಿಯಲ್ಲಿ ಕೊಡೇರಿ ಬಂದರು ಪ್ರದೇಶದಿಂದ ನರೇಶ ಖಾರ್ವಿ ಮನೆಗೆ ಬಾಡಿಗೆ ನಿಮಿತ್ತ ಹೋಗಿರುವುದು ಇದಕ್ಕೆ ಕಾರಣ~ ಎಂದು ಉದಯ ದೇವಾಡಿಗ ದೂರಿನಲ್ಲಿ ತಿಳಿಸಿದ್ದರು.

ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸುದ್ದಿ ವ್ಯಾಪಕ ಪ್ರಚಾರ ಪಡೆದ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಹಿರಿಯ ಅಧಿಕಾರಿಗಳು ಬಂದರು ನಿವೇಶನಕ್ಕೆ ಭೇಟಿ ನೀಡಿ ಪರಿಶೀಲಿಸಿದರು ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.